ಕಾರ್ಕಳ : ಮುಂಬಯಿ ಥಾಣೆಯ ಆದಿಶಕ್ತಿ ಕನ್ನಡ ಸಂಘದ ಕನ್ನಡ ಶಾಲೆಯಲ್ಲಿ 30 ವರ್ಷಗಳ ವರೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಲೋಕನಾಥ ಜೈನ್ ಮತ್ತು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ 30 ವರ್ಷ ಸೇವೆ ಸಲ್ಲಿಸಿದ ಸುಜಯ ಎಲ್.ಜೈನ್ ದಂಪತಿಯನ್ನು ಹಿರಿಯ ಸಹಕಾರಿ ಧುರೀಣ ಶಿರಿಯಣ್ಣ ಶೆಟ್ಟಿ ಮತ್ತು ಉದ್ಯಮಿ ಫೆಲಿಕ್ಸ್ ಮಥಾಯಿಸ್ ಗೌರವಿಸಿದರು.
ಹಿರ್ಗಾನದ ಅವರ ನಿವಾಸ ಸುವಿಧಿಯಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆದಿ ಗ್ರಾಮೋತ್ಸವ ಸಮಿತಿ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಹೊರನಾಡಿನಲ್ಲಿ ನಾವು ಮಾಡಿದ ಕೆಲಸಕ್ಕೆ ಕನ್ನಡ ನೆಲದಲ್ಲಿ ಸಂದ ಮೊದಲ ಗೌರವ. ನಾವು ವಿಶ್ರಾಂತ ಜೀವನ ಕಾರ್ಕಳ ತಾಲೂಕಿನಲ್ಲಿಯೇ ಕಳೆಯುತ್ತೇವೆ.
ತಮ್ಮ ಅನುಭವ ಇಲ್ಲಿನ ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳಲು ಸಿದ್ಧ ಎಂದು ದಂಪತಿ ಸನ್ಮಾನಕ್ಕೆ ಉತ್ತರಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು.
ಹಿರ್ಗಾನ ಪಂ. ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ, ಛಾಯಾಗ್ರಾಹಕ ಶರತ್ ಕಾನಂಗಿ, ಮುಖ್ಯೋಪಾಧ್ಯಾಯರಾದ ಎ.ಶಾಂತಿರಾಜ ಹೆಗ್ಡೆ , ಮಕರಂದ ಎಸ್. ಹೆಗ್ಡೆ, ಲೇಖಕಿ ಪ್ರೇಮಾ.ವಿ ಸೂರಿಗ, ಶಿಕ್ಷಕಿ ಆಶಾ ಅತಿಥಿಗಳಾಗಿದ್ದರು. ಅಜೆಕಾರು ಯುವರಾಜ ಅತಿಕಾರಿ, ಕವಿತಾ ಆದರ್ಶ ಅತಿಕಾರಿ, ಆಖೇಶ್ ಅತಿಕಾರಿ, ಶೀಲಾ ಪೂಜಾರಿ ಸುನಿಜ, ಸುನಿಧಿ ಉಪಸ್ಥಿತರಿದ್ದರು.
ಸಮಿತಿಯ ವಿದ್ಯಾರ್ಥಿ ವಿಭಾಗದ ಪದಾಧಿಕಾರಿ ನಿರೀಕ್ಷಾ ನೆಲ್ಲಿಕಟ್ಟೆ ವಂದಿಸಿದರು. ಆದರ್ಶ ಜೈನ್ ಸ್ವಾಗತಿಸಿದರು.
Kshetra Samachara
29/09/2020 06:38 pm