ಕುಂದಾಪುರ: ಕುಂದಾಪುರದ ಗುರುರಾಜ್ ಪೂಜಾರಿ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ನ 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2018ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ ನಂತರ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಗುರುರಾಜ ಅವರ ಎರಡನೇ ಪದಕವಾಗಿದೆ.
ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಯ ಪುತ್ರ ಗುರುರಾಜ ಪೂಜಾರಿ ಮೊದಲಿನಿಂದಲೂ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುವ ವೇಳೆ ಎಂ. ರಾಜೇಂದ್ರ ಪ್ರಸಾದ್ ವೇಟ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದ್ದರು. ಅಲ್ಲಿಂದೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಲೇ ಬಂದಿರುವ ಗುರುರಾಜ್, ಸೌತ್ ಏಷ್ಯನ್ ಗೇಮ್ಸ್ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಭರವಸೆ ಮೂಡಿಸಿದ್ದರು.
2018ರಲ್ಲಿ ನಡೆದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಗುರುರಾಜ್ ಪೂಜಾರಿಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡ ಮಾಡುವ ಏಕಲವ್ಯ ಪ್ರಶಸ್ತಿಗೂ ಪಾತ್ರರಾಗಿದ್ದರು. ಮತ್ತೆ ಈ ಬಾರಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪುರುಷರ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಮತ್ತೊಮ್ಮೆ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
Kshetra Samachara
31/07/2022 10:29 am