ಹೆಜಮಾಡಿ: ಉಡುಪಿ ಜಿಲ್ಲೆ ಹೆಜಮಾಡಿಯ ಉತ್ಸಾಹಿ ತರುಣ- ತರುಣಿಯರ ಕನಸಿನ ಮೈಕ್ರೋ ಸೀ ಪ್ಲೇನ್ ಇದೀಗ ಬಾನಿನಲ್ಲಿ ಹಾರಲು ಸಜ್ಜುಗೊಂಡಿದೆ! ದೇಶದ ಮೊತ್ತ ಮೊದಲ ಸೀ ಪ್ಲೇನ್ ಇದಾಗಿದೆ. ನೀರಿನಿಂದಲೇ ಟೇಕಾಫ್ ಆಗಿ ನೀರಿನಲ್ಲೇ ಲ್ಯಾಂಡ್ ಆಗುವ ನಮ್ಮ ರಾಷ್ಟ್ರದ ಮೊದಲ ಸೀ ಪ್ಲೇನ್ ಇದು ಎಂದು ಪ್ಲೇನ್ ತಯಾರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಹೇಳಿಕೊಂಡಿದೆ.
ಏರೋ ಮಾಡೆಲ್ ಇನ್ ಸ್ಟ್ರಕ್ಟರ್ ಪುಷ್ಪರಾಜ್ ಅಮೀನ್ ಅವರ ಸಾರಥ್ಯದಲ್ಲಿ ಸೀ ಪ್ಲೇನ್ ರೂಪುಗೊಂಡಿದೆ. ಸುಮಾರು 120 ಕೆ.ಜಿ. ತೂಕದ ಪೈಲೆಟ್ ರಹಿತ ಪ್ಲೇನ್ ಇದು. ರೆಕ್ಕೆಗಳು 35 ಅಡಿ ಇದ್ದು, 33 ಎಚ್ ಪಿ ಇಂಜಿನ್ ಸಾಮರ್ಥ್ಯ ಹೊಂದಿದೆ.
ಬಹುತೇಕ ಅಲ್ಯುಮೀನಿಯಂ, ಫಾಮ್ , ನೈಲನ್ ಕ್ಲಾತ್ ಮತ್ತಿತರ ಪರಿಕರಗಳಿಂದ ತಯಾರಿಸಲಾಗಿದೆ. ದ್ವೀಪದಿಂದ ದ್ವೀಪಕ್ಕೆ ಹಾರುವ ಸಾಮರ್ಥ್ಯ ಇದಕ್ಕಿದೆಯಾದರೂ ಸದ್ಯ, ಅನುಮತಿ ಸಿಕ್ಕಿಲ್ಲ. ನಮಗೆ ವರ್ಕ್ ಶಾಪ್ ಗೆ ಜಾಗ ಬೇಕು ಮತ್ತು ಸರಕಾರದ ಸಹಾಯಧನದ ಅವಶ್ಯಕತೆ ಇದೆ. ಸರಕಾರ ಉತ್ತೇಜನ ನೀಡಿದರೆ ಇನ್ನಷ್ಟು ಸಂಶೋಧನೆ ನಡೆಸಿ ದೇಶದ ಮೊದಲ ಸೀ ಪ್ಲೇನ್ ತಯಾರಿಸುತ್ತೇವೆ ಎನ್ನುತ್ತಾರೆ ಈ ತಂಡದ ಸದಸ್ಯರು.
ಈ ಸೀ ಪ್ಲೇನ್ ಕುರಿತು ಹೆಚ್ಚಿನ ರೀಸರ್ಚ್ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ತುಂಬಾ ಹಣ ಖರ್ಚು ಮಾಡಿದ್ದೇವೆ. ಇದು ನಮ್ಮ ಬಹಳ ವರ್ಷಗಳ ಕನಸು. ಇದನ್ನು ಇನ್ನಷ್ಟು ಡೆವಲಪ್ ಮಾಡಿ ಉಪಯೋಗಕ್ಕೆ ನೀಡಬೇಕು ಎನ್ನುವುದು ನಮ್ಮ ಆಸೆ. ಈ ಬಗ್ಗೆ ನಾವು ಹಲವರ ಜೊತೆ ಚರ್ಚೆ ಮಾಡಿದ್ದೇವೆ. ಸರಕಾರದ ಮಟ್ಟದಲ್ಲಿ ನಮಗೆ ಪ್ರೋತ್ಸಾಹ, ಉತ್ತೇಜನ ಬೇಕಿದೆ. ಸರಕಾರ ನಮಗೆ ಸಹಾಯಧನ ಮತ್ತು ವರ್ಕ್ ಶಾಪ್ ಗೆ ಜಾಗ ನೀಡಿ ಪ್ರೋತ್ಸಾಹಿಸಬೇಕು ಎಂದು ಈ ಪ್ಲೇನ್ ರೂವಾರಿಗಳು ಹೇಳಿದ್ದಾರೆ.
ಪುಷ್ಪರಾಜ್ ಅಮೀನ್ ನೇತೃತ್ವ, ಮಾರ್ಗದರ್ಶನದಲ್ಲಿ ಯುವ ಇಂಜಿನಿಯರ್ ಗಳಾದ ವಿನಯ ಯು., ವಸುರಾಜ್ ಅಮೀನ್, ಅಭಿಷೇಕ್, ಉತ್ಸವ, ಉಮೇಶ್ ,ರೇಶ್ಮಾ, ಶಯನಿ ರಾವ್, ಅಶ್ವಿನಿ ರಾವ್ ಈ ಮೈಕ್ರೋ ಸೀ ಪ್ಲೇನ್ ನಿರ್ಮಾತೃಗಳು.
Kshetra Samachara
26/02/2021 07:39 pm