ಮಂಗಳೂರು: ಒಂದು ಕಡೆ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾದ ಬಗ್ಗೆ ಮಾತಾಡುತ್ತಿದ್ದರೆ, ಇತ್ತ ಬುದ್ಧಿವಂತರ ಜಿಲ್ಲೆಯ ಜನ ಮೊಬೈಲ್ ನೆಟ್ ವರ್ಕ್ ಗಾಗಿ ಪರದಾಡುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಗಾಗಿ ಮಂಗಳೂರು, ಬೆಂಗಳೂರು ಅಂತಾ ಚಪ್ಪಲಿ ಸವೆಸಿದ ಮಂದಿಗೆ ಖಾಸಗಿ ಏರ್ ಟೆಲ್ ಕಂಪೆನಿಯೂ ದೋಖಾ ಮಾಡಿದೆ.. "ಟವರ್ ಪ್ಲೀಸ್.." ಎನ್ನುತ್ತಿರುವ ಇವರ ಗೋಳು ಕೇಳೋರೆ ಇಲ್ಲದಾಗಿದ್ದಾರೆ..
ಈ ರೀತಿ ಮೊಬೈಲ್ ಟವರ್ ಮಾಡಿಕೊಡಿ ಎನ್ನುತ್ತಿರುವುದು ಬೆಳ್ತಂಗಡಿ ತಾಲೂಕಿನ ಅತ್ಯಂತ ಪ್ರಕೃತಿ ಸೌಂದರ್ಯ ಹೊಂದಿರೋ ಶಿಬಾಜೆ ಗ್ರಾಮದ ಮಂದಿ. ಇಲ್ಲಿನ ಪೆರ್ಲ ಪರಿಸರದಲ್ಲಿ ಬಿಎಸ್ಎನ್ಎಲ್ ಟವರ್ ಹಾಕಿಸಿಕೊಳ್ಳೋದಕ್ಕಾಗಿ ಈ ಭಾಗದ ಮಂದಿ ಮಂಗಳೂರು, ಬೆಂಗಳೂರು ಕಚೇರಿ ಏನಿಲ್ಲಾ ಅಂದ್ರು 50 ಕ್ಕೂ ಹೆಚ್ಚು ಬಾರಿ ಹೋಗಿ ಬಂದಿದ್ದಾರೆ. ಸಂಸದರ ಬಳಿಗೆ ಹೋದವರಿಗೆ ಮಾಡೋಣ ಅನ್ನೋ ಭರವಸೆ ಮಾತು ಅಷ್ಟಕ್ಕೇ ಬಾಕಿಯಾಗಿದೆ. ಮೊದಲೇ ಅಡಕತ್ತರಿಯಲ್ಲಿರುವ ಬಿಎಸ್ಎನ್ಎಲ್ ನಂಬಿ ಕೂತರಾಗದು ಎಂದು ಮನಗಂಡ ಈ ಭಾಗದ ಮಂದಿ ಏರ್ ಟೆಲ್ ಸಂಸ್ಥೆಯ ಮೊರೆ ಹೋಗಿದ್ದಾರೆ. ಅದಕ್ಕಾಗಿಯೇ ಬಿಎಸ್ಎನ್ ಎಲ್ ಸಿಮ್ ಕಾರ್ಡ್ ಹೊಂದಿದ್ದ 720 ಗ್ರಾಹಕರು ಏರ್ ಟೆಲ್ ತಮ್ಮ ನಂಬರ್ ಗಳನ್ನ ಪರಿವರ್ತಿಸಿಕೊಂಡಿದ್ದಾರೆ. ಆದರೆ ಖಾಸಗಿ ಏರ್ ಟೆಲ್ ಸಂಸ್ಥೆಯ ಅಧಿಕಾರಿಗಳು ಕೂಡಾ ರಾಜಕೀಯ ಒತ್ತಡಕ್ಕೆ ಒಳಗಾಗಿ ಪೆರ್ಲ ಗ್ರಾಮದಲ್ಲಿ ಹಾಕಬೇಕಿದ್ದ ಏರ್ ಟೆಲ್ ಟವರ್ ಅನ್ನ ಭಂಡಿಹೊಳೆ ಕಡೆ ತಿರುಗಿಸಿದ್ದಾರೆ.
ಏರ್ ಟೆಲ್ ಕಂಪೆನಿಯ ದೋಖಾ ನಂತರ ಈ ಭಾಗದ ಮಂದಿ ಭ್ರಮನಿರಸಗೊಂಡಿದ್ದಾರೆ. ಅತ್ತ ಅಧಿಕಾರಿ, ಜನಪ್ರತಿನಿಧಿಗಳು ಕೈಲಾಗದವರಂತೆ ಆಡುತ್ತಿದ್ರೆ, ಇತ್ತ ಏರ್ ಟೆಲ್ ಸಂಸ್ಥೆ ಕೂಡಾ ಮೋಸ ಮಾಡಿದೆ. ಈ ಭಾಗದಲ್ಲಿ ಇನ್ನೂರು ಮಂದಿ ವಿದ್ಯಾರ್ಥಿಗಳಿದ್ದು ಅನಿವಾರ್ಯವಾಗಿ ಆನ್ ಲೈನ್ ಕ್ಲಾಸ್ ಗಾಗಿ ಎತ್ತರದ ಗುಡ್ಡ ಪ್ರದೇಶವನ್ನೋ, ಇಲ್ಲವೇ ಊರಿನಿಂದ ಹೊರಿಗಿರುವ ಕುಟುಂಬಿಕರ ಮನೆಯನ್ನೋ ಅವಲಂಬಿಸಬೇಕಿದೆ.
ಮೊಬೈಲ್ ಟವರ್ ಗಾಗಿ ದಶಕಗಳಿಂದ ಹೋರಾಟ, ಪ್ರತಿಭಟನೆ ಅಂತೆಲ್ಲಾ ಭಗೀರಥ ಪ್ರಯತ್ನ ನಡೆಸಿದ್ದ ಈ ಭಾಗದ ಮಂದಿ ಇದೀಗ ನಿರಾಶರಾಗಿದ್ದಾರೆ. ಅದರು ಕೊನೆಯದಾಗಿ ಮಾಧ್ಯಮಗಳ ಮೂಲಕವಾದರೂ ಏರ್ ಟೆಲ್ ಸಂಸ್ಥೆ ಟವರ್ ಕಲ್ಪಿಸಲಿ ಅನ್ನೋ ಬೇಡಿಕೆ ಮುಂದಿರಿಸಿದ್ದಾರೆ.
Kshetra Samachara
30/11/2020 05:32 pm