ಉಡುಪಿ: ಶ್ರೀಕೃಷ್ಣನ ಉಡುಪಿಯಲ್ಲಿ ಅಷ್ಟಮಿ ಕಳೆಗಟ್ಟುತ್ತಿದೆ. ಇಂದು ಉಪವಾಸ ಇರುವ ಕೃಷ್ಣ ಭಕ್ತರ ದಂಡೇ ಮಠದತ್ತ ಹರಿದು ಬರುತ್ತಿದೆ. ಶ್ರೀಗಳು ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಆರತಿ ಎತ್ತಿದರು.
ಅಷ್ಠನಿಯ ವಿಶೇಷ ಆಕರ್ಷಣೆಯೇ ಕೃಷ್ಣವೇಷ ಸ್ಪರ್ಧೆ. ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಮನಸೂರೆಗೊಳ್ಳುತ್ತಿದೆ. ಮುದ್ದು ಕೃಷ್ಣನ ವೇಷ ಭೂಷಣ ತೊಟ್ಟ ಮಕ್ಕಳ ನಲಿದಾಟ, ತುಂಟಾಟ ನಂದಗೋಕುಲ ಮರು ಸೃಷ್ಟಿಯಾದಂತೆ ಭಾಸವಾಗುತ್ತಿದೆ. ರಾಜಾಂಗಣ, ಭೋಜನಶಾಲೆಗಳಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದ್ದು, 140ಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ.
ಭೋಜನಶಾಲೆ ಮಾಳಿಗೆಯಲ್ಲಿ 4 ರಿಂದ 6 ವರ್ಷ ಮಕ್ಕಳ ಬಾಲಕೃಷ್ಣ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಅನ್ನಬ್ರಹ್ಮದಲ್ಲಿ ನಡೆದ 7 ರಿಂದ 10 ವರ್ಷದೊಳಗಿನ ಮಕ್ಕಳ ಕಿಶೋರ ಕೃಷ್ಣ ಸ್ಪರ್ಧೆಯಲ್ಲಿ 80ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಗುತ್ತಿದೆ.
ಪುಟಾಣಿಗಳ ಜೊತೆಗೆ ಪೋಷಕರ ಸಂಭ್ರಮವೂ ಮುಗಿಲು ಮುಟ್ಟಿದೆ. ತಮ್ಮ ಪುಟಾಣಿಗಳನ್ನು ಕರೆತಂದು ಕೃಷ್ಣನ ವಿವಿಧ ಪೋಷಾಕು ಹಾಕಿ ದೊಡ್ಡವರೂ ಮಕ್ಕಳಂತೆಯೇ ಸಂಭ್ರಮಿಸುತ್ತಿದ್ದಾರೆ.
Kshetra Samachara
19/08/2022 07:35 pm