ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 7 ತಿಂಗಳಿನಿಂದ ಸಭೆ ನಡೆಸದ ರಾಜ್ಯ ಧಾರ್ಮಿಕ ಪರಿಷತ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಗರಂ

ಮಂಗಳೂರು: ರಾಜ್ಯ ಧಾರ್ಮಿಕ ಪರಿಷತ್ ಕಳೆದ 7 ತಿಂಗಳಿನಿಂದ ಸಭೆ ನಡೆಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಪರಿಣಾಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ರಾಜ್ಯದ ಹಲವಾರು ದೇವಾಲಯಗಳ ಸಮಸ್ಯೆಗಳು, ವಿವಾದಗಳು ನೆನೆಗುದಿಗೆ ಬಿದ್ದಿವೆ. ಇದಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರೇ ನೇರ ಹೊಣೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಗಂಭೀರವಾದ ಆರೋಪವನ್ನು ಹೊರಿಸಿದೆ.

ರಾಜ್ಯ ಧಾರ್ಮಿಕ ಪರಿಷತ್ ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ, ಪೂಜೆ, ಧಾರ್ಮಿಕ ಆಚರಣೆಗಳು, ಇನ್ನಿತರ ಸಮಸ್ಯೆಗಳು, ದೂರುಗಳ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುತ್ತದೆ‌. ಮುಜರಾಯಿ ಸಚಿವರು ರಾಜ್ಯ ಧಾರ್ಮಿಕ ಪರಿಷತ್ ನ ಅಧ್ಯಕ್ಷರಾಗಿರುತ್ತಾರೆ. ಆದರೆ ಶಶಿಕಲಾ ಜೊಲ್ಲೆಯವರು ಡಿಸೆಂಬರ್ ತಿಂಗಳ ಬಳಿಕ ಇದುವರೆಗೆ ಸಭೆ ನಡೆಸಿಲ್ಲ ಎಂದು ಆರೋಪಿಸಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಪ್ರದಾಯ ಉಲ್ಲಂಘನೆಯಾಗಿದೆ. ಶೈವಾಂಶ ದೇವಸ್ಥಾನದ ಇಲ್ಲಿ ವೈಖಾನಸ ಆಗಮದಲ್ಲಿ ಪೂಜೆಯಾಗಬೇಕು. ಆದರೆ ತಂತ್ರಾಗಮಸಾರದಲ್ಲಿ ಪೂಜೆ ಮಾಡಲಾಗುತ್ತಿದೆ. ದೇವಸ್ಥಾನದ ಪರಿವಾರ ದೇವರುಗಳಿಗೆ ನಿತ್ಯ ಮೂರು ಹೊತ್ತು ಪೂಜೆ, ನೈವೇದ್ಯ ಸಲ್ಲಿಕೆಯಾಗುತ್ತಿಲ್ಲ. ಗರ್ಭಗುಡಿಯೊಳಗಿನ ಮೂಲ ಮಹಾಗಣಪತಿ ದೇವರಿಗೆ ಯಾವುದೇ ಪೂಜೆಯು ನಡೆಯುತ್ತಿಲ್ಲ. ಈ ಮೂಲಕ ದೇವಸ್ಥಾನದ ದಿಟ್ಟಂ ಪ್ರಕಾರದ ಸಂಪ್ರದಾಯವನ್ನು ಪಾಲಿಸದ ಅರ್ಚಕರ ಅಮಾನತು ಆಗಲಿ ಎಂದು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಏಕಾದಶಿ ದಿನ ಶ್ರೀ ಸುಬ್ರಹ್ಮಣ್ಯ ದೇವರಿಗೆ ಅನ್ನ ನೈವೇದ್ಯವಾದರೂ, ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗದೆ ಉಪಹಾರದಲ್ಲಿ ಸುಧಾರಿಸಲಾಗುತ್ತದೆ‌. ಶೈವ ದೇವಸ್ಥಾನದಲ್ಲಿ ವೈಷ್ಣವ ಪರಂಪರೆಯ ಏಕಾದಶಿ ಉಪವಾಸ ಅಗತ್ಯವಿಲ್ಲ. ಅಲ್ಲದೆ ಧಾರ್ಮಿಕ ಪರಿಷತ್ ಸದಸ್ಯರನ್ನು ಹಿನಾಯವಾಗಿ ಬೈದು ನಿಂದಿಸಿರುವ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ದೇವಾಲಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಧಾರ್ಮಿಕ ಪರಿಷತ್ ಸಭೆ ನಡೆಸದೆ ಮುಜರಾಯಿ ಸಚಿವರು ಮೌನವಿರೋದು ಸರಿಯಲ್ಲ. ತಕ್ಷಣ ಅವರು ಸಭೆ ಕರೆದು ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

Edited By : Shivu K
Kshetra Samachara

Kshetra Samachara

27/06/2022 10:41 pm

Cinque Terre

12.16 K

Cinque Terre

0

ಸಂಬಂಧಿತ ಸುದ್ದಿ