ಮೂಡುಬಿದಿರೆ: ಮಹತೋಭಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನವನ್ನು ಸುಮಾರು 6 ಕೋಟಿ ರೂ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗುತ್ತಿದ್ದು ಸೋಮವಾರ ಸೋಮನಾಥೇಶ್ವರ ದೇವರು, ಮಹಿಷಮರ್ದಿನಿ ಅಮ್ಮನವರು ಹಾಗೂ ಪರಿವಾರ ದೇವರುಗಳ ನೂತನ ಗರ್ಭಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಉಡುಪಿ ಅದಮಾರು ಮಠಾಧೀಶರಾದ ಶ್ರೀಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಕರಾವಳಿಯು ಧಾರ್ಮಿಕವಾಗಿ ಮಹತ್ವದ ಪುಣ್ಯಭೂಮಿಯಾಗಿದೆ. ಹಿಂದಿನವರು ನಿರ್ಮಿಸಿದ ದೇವಾಲಯಗಳನ್ನು ಉಳಿಸಿ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮನುಷ್ಯರು ನಂಜು ಬಿಟ್ಟು ನಂಜುಡೇಶ್ವರನನ್ನು ಪ್ರಾರ್ಥಿಸಿದರೆ ಆ ದೇವರ ಶಕ್ತಿಯಿಂದ ಬಾಹ್ಯ ಮತ್ತು ಆಂತರಿಕವಾಗಿರುವ ನಂಜನ್ನು ನಿಗ್ರಹಿಸಿದರೆ ಎಲ್ಲಾ ಜನರ ಹಿತ ಸಾಧ್ಯ. ತಾನು ಹುಟ್ಟಿ ಬೆಳೆದ ಪುತ್ತಿಗೆಯ ಆಸುಪಾಸನ್ನು ನೆನಪಿಸಿದ ಅವರು ತಮ್ಮ ವತಿಯಿಂದ 11,11,111ರೂಗಳ ಚೆಕ್‌ನ್ನು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕುಲದೀಪ ಎಂ.ಅವರಿಗೆ ಹಸ್ತಾಂತರಿಸಿದರು.
ಕಟೀಲಿನ ಅನುವಂಶಿಕ ಅರ್ಚಕರಾದ ವೇ.ಮೂ ಲಕ್ಷ್ಮಿ ನಾರಾಯಣ ಅಸ್ರಣ್ಣ ಮನಸ್ಸುಗಳು ಶುದ್ಧವಾಗಿ ಒಂದಾದರೆ ದೇವತಾಕಾರ್ಯ ಯಶಸ್ವಿ ಎಂದರು. ವೇ.ಮೂ ಹರಿನಾರಾಯಣದಾಸ ಅಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಮಾತನಾಡಿದರು.
ಸಂಸದ ನಳಿನ್‌ಕುಮಾರ್ ಕಟೀಲು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಶುಭ ಹಾರೈಸಿದರು.
ಉದ್ಯಮಿ, ಬಾಲಾಜಿ ಸಮೂಹದ ಕೆ.ವಿಶ್ವನಾಥ ಪ್ರಭು ದಂಪತಿಗಳು 2 ಲಕ್ಷರೂಗಳ ಚೆಕ್‌ನ್ನು ಹಸ್ತಾಂತರಿಸಿದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪುತ್ತಿಗೆ ಗ್ರಾ.ಪಂಅಧ್ಯಕ್ಷ ಪ್ರವೀಣ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮಹಿಷಮರ್ದಿನಿ ಗರ್ಭಗುಡಿಯ ದಾನಿ ರಾಂಪ್ರಸಾದ್ ಭಟ್, ವಾಸ್ತುಶಿಲ್ಪಿ ಗುಂಡಿಬೈಲು ಸುಬ್ರಹ್ಮಣ್ಯ ತಂತ್ರಿ ಉಪಸ್ಥಿತರಿದ್ದರು.
ವಿದ್ಯಾ ರಮೇಶ್ ಭಟ್, ಪ್ರಾಸ್ತಾವಿಕವಾಗಿ ಮಾತನಾಡಿ ಕಾಮಗಾರಿಯ ಪ್ರಗತಿಯ ವಿವರ ನೀಡಿದರು. ಪ್ರಶಾಂತ್ ಭಂಡಾರಿ ಕಾರ‍್ಯಕ್ರಮ ನಿರೂಪಿಸಿದರು.
Kshetra Samachara
23/05/2022 10:33 pm