ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯ ಶ್ರೀ ಕೃಷ್ಣಮಠಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸರ್ಕಾರದ ನೆರವಿನಿಂದ ಅದಮಾರು ಮಠದ ಪರ್ಯಾಯ ಕಾಲದಲ್ಲಿ ʼವಿಶ್ವಪಥʼ ನಿರ್ಮಿಸಲಾಗಿತ್ತು. ಅದಮಾರು ಪರ್ಯಾಯ ಮುಗಿದು, ಕೃಷ್ಣಾಪುರ ಪರ್ಯಾಯ ಆರಂಭವಾಗುತ್ತಿದ್ದಂತೆ ವಿಶ್ವಪಥ ಮುಚ್ಚಲಾಗಿದೆ! ಹಾಗಾದರೆ, ಉಡುಪಿ ಪರ್ಯಾಯ ಅಂದರೆ ಒಂದು ಮಠದವರು ಮಾಡಿದ್ದನ್ನು ಮತ್ತೊಂದು ಮಠದವರು ಮುಚ್ಚೋದಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮಠದಲ್ಲಿ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾದಾಗ, ಸರತಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ 2 ವರ್ಷ ಪರ್ಯಾಯ ಉತ್ಸವ ನಡೆಸಿದ್ದ ಅದಮಾರು ಮಠದವರು ʼವಿಶ್ವ ಪಥʼ ನಿರ್ಮಿಸಿದ್ದರು. ಅದಕ್ಕಾಗಿ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಮಾಡಿದ್ದರು. ಆರಾಮವಾಗಿ ನೆರಳಿನಲ್ಲಿ ಸರತಿ ಸಾಲಿನಲ್ಲಿ ನಿಂತು, ಭಕ್ತರು ದೇವರ ದರ್ಶನಕ್ಕೆ ಹೋಗಬಹುದಿತ್ತು.
ಆದರೆ, ಜ.18ರಂದು ಕೃಷ್ಣಾಪುರ ಮಠ ಪೂಜಾಧಿಕಾರ ಪಡೆಯುತ್ತಿದ್ದಂತೆ, ವಿಶ್ವಪಥ ಮುಚ್ಚಲಾಗಿದೆ. ಮತ್ತೆ ಮುಂಬಾಗಿಲಿನಿಂದ ನೇರ ಕೃಷ್ಣಮಠಕ್ಕೆ ಪ್ರವೇಶ ಒದಗಿಸಲಾಗಿದೆ. ಲಕ್ಷಾಂತರ ವೆಚ್ಚದ ʼವಿಶ್ವ ಪಥʼ ಆಗ ಕೋವಿಡ್ ನಿಂದಾಗಿ ಮಠ ಮುಚ್ಚಿದ್ದರಿಂದ, ಯೋಜನೆ ಪ್ರಯೋಜನವಾಗಿರಲಿಲ್ಲ. ಇದೀಗ ಅಗತ್ಯವಿರುವಾಗ ಗೇಟ್ ಮುಚ್ಚಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶ್ವಪಥ ಅನೇಕ ಹೊಸತನ ಹೊಂದಿತ್ತು. ಈ ಮಾರ್ಗದಲ್ಲಿ ಹೋಗುವಾಗ ಮಧ್ವ ಸರೋವರ, ಅಷ್ಟಮಠಗಳು, ರಥಗಳು, ರಥಬೀದಿ, ಕಟ್ಟಿಗೆ ರಥ, ಸುಂದರ ಕಂಬಗಳು ಮಠಕ್ಕೆ ಬಳಿದ ನೈಸರ್ಗಿಕ ಬಣ್ಣ, ಮಂದ ಬೆಳಕು, ಎಲ್ಲಕ್ಕೂ ಮಿಗಿಲಾಗಿ ಕೃಷ್ಣಮಠಕ್ಕೆ ಹಾಕಿರುವ ಚಿನ್ನದ ಮೇಲ್ಚಾವಣಿ ಸೊಬಗು ಕಾಣಬಹುದಿತ್ತು.
ಆದರೆ, ದೇವರ ಗುಡಿ ಮೇಲ್ಭಾಗದಿಂದ ನಡೆದು ಹೋಗುವ ಬಗ್ಗೆ ಕೆಲ ಭಕ್ತರಿಂದ ಆಕ್ಷೇಪ ಬಂದಿತ್ತು. ಇದೀಗ ಕೃಷ್ಣಾಪುರ ಮಠದವರು ಮತ್ತೆ ಹಳೆ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಯಾವುದೇ ಯೋಜನೆ ಅನುಷ್ಠಾನಿಸುವಾಗ, ಅಷ್ಟಮಠಾಧೀಶರು ಚರ್ಚಿಸಿ, ಜಾರಿಗೊಳಿಸಿದರೆ ಗೊಂದಲಕ್ಕೆ ಅವಕಾಶವಿರುವುದಿಲ್ಲ ಅನ್ನೋದು ಭಕ್ತರ ಅಭಿಪ್ರಾಯ.
PublicNext
09/02/2022 07:38 pm