ಕಾಪು: ಪರ್ಯಾಯ ಪೀಠವನ್ನೇರುವ ಉಡುಪಿ ಅಷ್ಟಮಠ ಯತಿಗಳ ಸರ್ವಜ್ಞ ಪೀಠಾರೋಹಣ ಸಂಭ್ರಮ ಆರಂಭಗೊಳ್ಳುವುದು ಕಾಪುವಿನಲ್ಲಿ ಎಂಬುದು ವಿಶೇಷ. ಕಾಪು ದಂಡತೀರ್ಥ ಮಠದ ಕೆರೆಯಲ್ಲಿ ಪವಿತ್ರ ಸ್ನಾನ ನೆರವೇರಿಸಿದ ಬಳಿಕವಷ್ಟೇ ಪರ್ಯಾಯ ಸ್ವಾಮಿಗಳ ವೈಭವದ ಪರ್ಯಾಯ ಮೆರವಣಿಗೆ ಆರಂಭಗೊಳ್ಳುತ್ತದೆ.
ಪರ್ಯಾಯ ಪೀಠಾರೋಹಣಗೈಯ್ಯಲಿರುವ ಸ್ವಾಮೀಜಿಗಳು ಕಾಪು ದಂಡತೀರ್ಥ ಮಠಕ್ಕೆ ಬಂದು, ಆಚಾರ್ಯ ಮಧ್ವರು ದಂಡದಿಂದ ಸೃಷ್ಟಿಸಿದ ದಂಡತೀರ್ಥ ಕೆರೆಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿ ಬಳಿಕ ಜೋಡುಕಟ್ಟೆಗೆ ತೆರಳಿ ಪರ್ಯಾಯ ಮೆರವಣಿಗೆ ನಡೆಸುವುದು ವಾಡಿಕೆ. ಜ.17 ರಂದು ಮಧ್ಯರಾತ್ರಿ ಕಳೆದು ಮುಂಜಾನೆ ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿ, ಕೆರೆಯಲ್ಲಿ ತೀರ್ಥಸ್ನಾನ ಮಾಡಲಿದ್ದಾರೆ.
ಬಳಿಕ ಕಮಂಡಲದಲ್ಲಿ ತೀರ್ಥ ಕುಂಡದಿಂದ ತೀರ್ಥ ತುಂಬಿಸಿ ಪಟ್ಟದ ದೇವರ ಸಹಿತವಾಗಿ ದಂಡತೀರ್ಥ ಮಠದ ಕುಂಜಿ ಗೋಪಾಲಕೃಷ್ಣ ದೇವರು, ಪರಿವಾರ ಸಹಿತ ರಾಮ-ಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸಿ ಮುಖ್ಯಪ್ರಾಣ ದೇವರಿಗೆ ನಮಿಸಿ, ವಿವಿಧ ಸಂಪ್ರದಾಯ ಪಾಲನೆ ಬಳಿಕ ತಮ್ಮ ದ್ವೈ ವಾರ್ಷಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸುತ್ತಾರೆ.
ಭಾವಿ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ದಂಡತೀರ್ಥ ಮಠ ಪ್ರತಿಷ್ಠಾನ ಅಧ್ಯಕ್ಷ ಸೀತಾರಾಮ ಭಟ್ ನೇತೃತ್ವದಲ್ಲಿ ದಂಡತೀರ್ಥ ಮಠದಲ್ಲಿ ಆಚಾರ್ಯ ಏಕಶಿಲಾ ವಿಗ್ರಹವನ್ನು ಈ ಬಾರಿ ಪ್ರತಿಷ್ಠಾಪಿಸಲಾಗಿದೆ. ದಂಡತೀರ್ಥ ಮಠ ಕೃಷ್ಣಾಪುರ ಮಠದ ಅಧೀನದಲ್ಲಿದ್ದು, ಈ ಕಾರಣದಿಂದ ಈ ಬಾರಿಯ ಪರ್ಯಾಯ ಮಹೋತ್ಸವಕ್ಕೆ ವಿಶೇಷತೆ ಬಂದಿದೆ.
PublicNext
17/01/2022 01:11 pm