ಮಂಗಳೂರು: ಮದುವೆ ಸಂಭ್ರಮಾಚರಣೆಯಲ್ಲಿ ಮುಸ್ಲಿಂ ಯುವಕರು ತುಳುನಾಡಿನ ಆರಾಧ್ಯ ದೈವ ಶ್ರೀ ಕೊರಗಜ್ಜನ ವೇಷವನ್ನು ವರನಿಗೆ ತೊಡಿಸಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಭಕ್ತರು ಕೋಲ ನಡೆಯುವಾಗ ಕೊರಗಜ್ಜ ದೈವದ ಬಳಿಯೇ ದೂರು ನೀಡಿರುವ ಘಟನೆ ನಗರದ ಅತ್ತಾವರ ಬಳಿ ನಡೆದಿದೆ.
ವಿಟ್ಲದ ಸಾಲೆತ್ತೂರಿನಲ್ಲಿ ಮದುವೆ ಸಂಭ್ರಮದ ನೆಪದಲ್ಲಿ ಮುಸ್ಲಿಂ ಧರ್ಮದ ಯುವಕರು ಮದುಮಗಳ ಮನೆಗೆ ಬರುವ ವೇಳೆ ವರನಿಗೆ ಶ್ರೀ ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದಿದ್ದರು. ಈ ವೀಡಿಯೊ ವೈರಲ್ ಆಗಿ ನಿನ್ನೆ ಹಿಂದೂ ಧರ್ಮೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಈ ಬಗ್ಗೆ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಈ ಕುಕೃತ್ಯದಿಂದ ಬೇಸರಗೊಂಡ ಭಕ್ತರು ಮೇಲಿನಮೊಗರು ಅತ್ತಾವರ ಪರಿಸರದ ಕೊರಗಜ್ಜನ ಕಟ್ಟೆಯಲ್ಲಿ ನಿನ್ನೆ ರಾತ್ರಿ ನಡೆದ ಕೋಲದ ಸಂದರ್ಭ ಶ್ರೀ ಕೊರಗಜ್ಜ ದೈವದೊಂದಿಗೆ ಈ ಬಗ್ಗೆ ದೂರು ಹೇಳಿ ಕೃತ್ಯ ಎಸಗಿದವರಿಗೆ ಶಿಕ್ಷೆ ಆಗಬೇಕೆಂದು ಭಿನ್ನವಿಸಿಕೊಂಡಿದ್ದರು.
ಆಗ ಕೊರಗಜ್ಜ ದೈವವು, ನೀಡಿರುವ ನುಡಿಯಲ್ಲಿ ''ಭಯಪಡದಿರಿ, ನನ್ನನ್ನು ಯಾವ ರೀತಿ ಅವರು ಮರುಳನಂತೆ ಚಿತ್ರಿಸಿ ಕುಡಿದಾಡಿದರೋ, ಒಂದು ತಿಂಗಳೊಳಗೇ ಅವರನ್ನೂ ಅದೇ ರೀತಿ ಹುಚ್ಚರಂತೆ ಮಾಡಿ ಬೀದಿ ಮೆರವಣಿಗೆ ಮಾಡಿಸುವೆ" ಎಂದು ಭಕ್ತರಿಗೆ ಅಭಯ ನೀಡಿದೆ. ಇದೀಗ ಕಾರಣಿಕ ದೈವ ಶ್ರೀ ಕೊರಗಜ್ಜ, ಕುಕಾರ್ಯ ಎಸಗಿರುವ ದುಷ್ಕರ್ಮಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಿದ್ದಾರೆ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.
Kshetra Samachara
08/01/2022 01:08 pm