.ಉಡುಪಿ: ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ವಿಶೇಷ ಮಹತ್ವ. ಮಠಾಧೀಶರ ಮೂಲಕ ತಪ್ತ ಮುದ್ರೆ ಹಾಕಿಸಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ಮಾಧ್ವ ಮತದ ಮೂಲ ಕೇಂದ್ರವಾಗಿರುವ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನೂರಾರು ಭಕ್ತರು ಇಂದು ಮುದ್ರಾಧಾರಣೆ ಮಾಡಿಸಿಕೊಂಡರು.
ಪರ್ಯಾಯ ಮಠಾಧೀಶರಿಂದ ಮುದ್ರೆ ಹಾಕಿಸಿಕೊಂಡರೆ ರೋಗ ರುಜಿನ ದೂರವಾಗಿ, ಕೃಷ್ಣನ ಅನುಗ್ರಹ ಪ್ರಾಪ್ತಿ ಆಗುತ್ತದೆ ಅನ್ನೋದು ಅದಮ್ಯ ನಂಬಿಕೆ.
ಹೀಗಾಗಿ ನೂರಾರು ಭಕ್ತರು ಪರ್ಯಾಯ ಅದಮಾರು ಈಶಪ್ರಿಯ ತೀರ್ಥರಿಂದ ಮುದ್ರಾ ಧಾರಣೆ ಮಾಡಿಸಿಕೊಂಡರು.
ಯತಿಗಳಿಂದ ಮಾತ್ರ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕೆಂಬ ಪದ್ಧತಿಯಿದೆ. ಶ್ರೀ ಮಹಾವಿಷ್ಣು ದೇವರ ಆಯುಧಗಳಾದ ಶಂಖ, ಚಕ್ರದ ಚಿಹ್ನೆಯನ್ನು ಬಿಸಿಯಿಂದ ಕಾದ ಲೋಹದ ಮೂಲಕ ಮೈಮೇಲೆ ಧರಿಸುವುದು ಸಂಪ್ರದಾಯ.
ಬ್ರಹ್ಮಾದಿ ದೇವತೆಗಳೂ ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ. ಶ್ರೀ ಮಧ್ವಚಾರ್ಯರು ಈ ದಿನವೇ ಸ್ವರ್ಗದಲ್ಲಿ ಎಲ್ಲ ದೇವತೆಗಳಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬುದು ಕಥೆ. ಪುರುಷರು ಪಂಚಮುದ್ರೆ ಇರಿಸಿಕೊಂಡರೆ, ಮಹಿಳೆಯರು ಎಡತೋಳಿಗೆ ಶಂಖ, ಬಲತೋಳಿಗೆ ಚಕ್ರಮುದ್ರೆ ಇರಿಸಿಕೊಳ್ಳುತ್ತಾರೆ. ಅಳುತ್ತಲೇ ಮುದ್ರೆ ಇರಿಸಿಕೊಳ್ಳುವ ಮಕ್ಕಳು ಮತ್ತು ವೃದ್ಧಾಪ್ಯದಲ್ಲೂ ಬಿಸಿ ಲೋಹ ಮೈಮೇಲೆ ಇರಿಸಿಕೊಳ್ಳುವ ಇಳಿವಯಸ್ಸಿನವರ ಹುಮ್ಮಸ್ಸು ಮುದ್ರಾಧಾರಣೆಯ ವಿಶೇಷ.
ಸುದರ್ಶನ ಹೋಮಕುಂಡದಲ್ಲಿ ಶಂಖ, ಚಕ್ರದ ಲೋಹ ಅಚ್ಚು ಇರಿಸಿ ಮುದ್ರಾಧಾರಣೆ ಮಾಡುವುದರಿಂದ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುವುದು.
ಇಲ್ಲಿನ ಅಷ್ಟಮಠಾಧೀಶರು ವಿವಿಧೆಡೆ ತೆರಳಿ ಈ ದಿನ ಭಕ್ತರಿಗೆ ಮುದ್ರಾಧಾರಣೆ ಮಾಡುತ್ತಾರೆ. ಮುದ್ರೆಧಾರಣೆಯಿಂದ ಸರ್ವ ರೋಗ ನಿವಾರಣೆಯಾಗಿ ಲೋಕ ಕಲ್ಯಾಣ ಆಗುತ್ತದೆಂಬ ನಂಬಿಕೆ ಭಕ್ತ ಸಮೂಹದ್ದು.
Kshetra Samachara
16/11/2021 12:28 pm