ಕೊಲ್ಲೂರು: ಪ್ರಸಿದ್ಧ ದೇವಿ ಕ್ಷೇತ್ರ ಕೊಲ್ಲೂರಿನಲ್ಲಿಂದು ವಿಜಯದಶಮಿ ಸಂಭ್ರಮ.ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ವಿಜಯದಶಮಿಯಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಗುತ್ತದೆ.ಹೀಗಾಗಿ ತಮ್ಮ ಮಕ್ಕಳು ಜ್ಞಾನ ಸಂಪನ್ನರಾಗಬೇಕು ಅನ್ನುವ ಆಶಯ ಹೊತ್ತು ಹೆತ್ತವರ ದಂಡೇ ಇವತ್ತು ದೇವಸ್ಥಾನಕ್ಕೆ ಆಗಮಿಸಿತ್ತು....
ಈ ದಿನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿದರೆ ಅವರ ಜೀವನ ಜ್ಞಾನ ಸಮೃದ್ಧ ವಾಗುತ್ತದೆ ಅನ್ನೋದು ನಂಬಿಕೆ. ಹಾಗಾಗಿ ದೇವಿಯ ಆಲಯಗಳಲ್ಲಿ ಸಾವಿರಾರು ಪೋಷಕರು ಮಕ್ಕಳಿಗೆ ವಿದ್ಯಾರಂಭ ಸಂಪ್ರದಾಯವನ್ನು ನೆರವೇರಿಸುತ್ತಾರೆ. ಉಡುಪಿಯ ಪ್ರಸಿದ್ದ ಶಕ್ತಿ ಕೇಂದ್ರವಾಗಿರುವ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ನೂರಾರು ಪೋಷಕರು ಪುಟ್ಟಪುಟ್ಟ ಮಕ್ಕಳನ್ನು ತೋಳಲ್ಲಿ ಹೊತ್ತು ಬಂದು, ದೇವಿಯ ಸನ್ನಿದಾನದಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಕಳೆದ ಒಂಬತ್ತು ದಿನಗಳ ಕಾಲ ನವರಾತ್ರಿಯ ಸಂಭ್ರಮದಲ್ಲಿದ್ದ ದೇವಳದ ಆವರಣದಲ್ಲಿ, ಇವತ್ತು ಪುಟ್ಟ ಮಕ್ಕಳ ಕಲರವ ಮೇಳೈಸಿತ್ತು....
ತಾಯಿಯೇ ಮೊದಲ ಗುರು ಅಂತಾರೆ, ಪ್ರತಿಯೊಬ್ಬ ತಾಯಿಯೂ ದೇವರ ಸಮ್ಮುಖದಲ್ಲಿ ಕುಳಿತು, ಹರವಿದ ಅಕ್ಕಿಯ ರಾಶಿಯಲ್ಲಿ ಮಕ್ಕಳ ಮೂಲಕ ಅಕ್ಷರ ಮೂಡಿಸುವುದು ವಿದ್ಯಾರಂಭದ ಸಂಪ್ರದಾಯ. ಓಂ ಕಾರ, ಶ್ರೀಕಾರಗಳನ್ನು ಬರೆದು, ಬಳಿಕ ಕನ್ನಡ ಅಕ್ಷರಮಾಲೆಯನ್ನು ಅಕ್ಕಿಯ ರಾಶಿಯಲ್ಲಿ ಮೂಡಿಸುವುದು ಪದ್ಧತಿ. ಕೇರಳ ರಾಜ್ಯದ ಪ್ರತಿಯೊಬ್ಬ ಮೂಕಾಂಬಿಕೆ ಭಕ್ತರು, ಕೊಲ್ಲೂರಿನಲ್ಲೇ ತಮ್ಮ ಮಕ್ಕಳ ಮೊದಲ ಅಕ್ಷರಾಭ್ಯಾಸ ಮಾಡಿಸಬೇಕು ಎಂಬ ಕನಸು ಹೊತ್ತಿರುತ್ತಾರೆ. ಆದ್ದರಿಂದಲೇ ಅತಿ ಹೆಚ್ಚು ಸಂಖ್ಯೆಯ ಕೇರಳಿಗರು ಈ ದಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಒಟ್ಟಿನಲ್ಲಿ ಇವತ್ತು ಮೂಕಾಂಬಿಕೆ ಸನ್ನಿಧಿಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ನೂರು ಕನಸು ಹೊತ್ತ ಪೋಷಕರ ಮುಖದಲ್ಲಿ ಅದೇನೋ ಧನ್ಯತೆ ಕಾಣುತ್ತಿತ್ತು.
Kshetra Samachara
15/10/2021 03:17 pm