ಮಂಗಳೂರು:ಕೇರಳ ಹಾಗೂ ಕರ್ನಾಟಕದಲ್ಲಿ ತೈಲ ದರದಲ್ಲಿ ಭಾರೀ ಅಂತರವಿದ್ದು, ಕೇರಳ ಗಡಿ ಭಾಗದ ವಾಹನ ಸವಾರರು ಕರ್ನಾಟಕದ ಪೆಟ್ರೋಲ್ ಪಂಪ್‌ಗಳನ್ನು ಆಶ್ರಯಿಸುತ್ತಿದ್ದಾರೆ. ಇದರಿಂದ ಕೇರಳ ಸರಕಾರಕ್ಕೆ ಪ್ರತಿ ದಿನ ತೆರಿಗೆ ರೂಪದಲ್ಲಿ ಲಭಿಸುತ್ತಿದ್ದ ಕೋಟ್ಯಂತರ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ.
ಕೇಂದ್ರ ಸರಕಾರವು ಪೆಟ್ರೋಲ್, ಡೀಸೆಲ್‌ಗಳ ಅಬಕಾರಿ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾದೇಶಿಕ ಇಂಧನ ತೆರಿಗೆ ಇಳಿಕೆ ಮಾಡಲಾಗಿದೆ. ಆದರೆ ಕೇರಳ ಸಹಿತ ಬಿಜೆಪಿಯೇತರ ಸರಕಾರಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ಇಂಧನ ತೆರಿಗೆ ಕಡಿತಕ್ಕೆ ಸರಕಾರಗಳು ಮುಂದಾಗದ ಕಾರಣ ಬಿಜೆಪಿಯೇತರ ರಾಜ್ಯ ಸರಕಾರಗಳ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಲಭಿಸುತ್ತಿದ್ದ ಆದಾಯ ನೆರೆ ರಾಜ್ಯದ ಪಾಲಾಗುತ್ತಿದೆ.
ಕಾಸರಗೋಡು ಜಿಲ್ಲೆಯ ಗಡಿ ಭಾಗದ ಜನರು ಕರ್ನಾಟಕದ ಪೆಟ್ರೋಲ್ ಪಂಪ್‌ಗಳನ್ನು ಆಶ್ರಯಿಸುತ್ತಿದ್ದು, ಗಡಿ ಭಾಗದ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಮಾರಾಟದಲ್ಲಿ ಕುಸಿತವಾಗಿದೆ. ಜಿಲ್ಲೆಯ ಗಡಿ ಭಾಗದ ಬಹುತೇಕ ಬಂಕ್‌ಗಳಲ್ಲಿ ಗ್ರಾಹಕರೇ ಇಲ್ಲದ ಸ್ಥಿತಿ ಎದುರಾಗಿದೆ. ಕೇರಳದಲ್ಲಿ ಡೀಸೆಲ್‌ಗೆ ಶೇ. 22.76 ಮತ್ತು ಪೆಟ್ರೋಲ್‌ಗೆ ಶೇ. 30.08 ಮಾರಾಟ ತೆರಿಗೆ (ಕೆಜಿಎಸ್ ಟಿ) ಹೇರಲಾಗಿದೆ. ಅಲ್ಲದೆ ಪ್ರತಿ ಲೀಟರ್‌ಗೆ ಹೆಚ್ಚುವರಿ 1 ರೂ. ತೆರಿಗೆ ವಿಧಿಸುತ್ತಿದೆ. ಕೆಜಿಎಸ್‌ಟಿ ಹೊರತುಪಡಿಸಿ ಶೇ.1ರಷ್ಟು ಸ್ಪೆಷಲ್ ಸೆಸ್ ವಸೂಲಿ ಮಾಡುತ್ತಿದೆ. ಸಾಮಾನ್ಯ ಪ್ರಮಾಣದ ಮಾರಾಟ ನಡೆಯುವ ಬಂಕ್‌ಗಳಿಂದಲೂ ಪ್ರತಿ ತಿಂಗಳು ತೆರಿಗೆ ರೂಪದಲ್ಲಿ 25 ಲಕ್ಷ ರೂ. ಆದಾಯ ಕೇರಳ ಸರಕಾರಕ್ಕೆ ಲಭಿಸುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲೇ 20 ಕೋಟಿ ರೂ.ಗಿಂತ ಹೆಚ್ಚು ತೆರಿಗೆ ಪಾವತಿಸುವ ಬಂಕ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಕೇರಳ-ಕರ್ನಾಟಕ ನಡುವಿನ ಇಂಧನ ಬೆಲೆ ಅಂತರದಿಂದಾಗಿ ಕೇರಳದ ಪೆಟ್ರೋಲ್ ಪಂಪ್‌ಗಳ ಮಾರಾಟ ಪ್ರಮಾಣ ಕುಸಿದಿದೆ.
ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಪೆಟ್ರೋಲ್ ಪಂಪ್‌ಗಳಲ್ಲಿ ಶೇ. 75ರಷ್ಟು ವಹಿವಾಟು ಕಡಿಮೆಯಾಗಿದೆ. ದಿನವೊಂದರಲ್ಲಿ ಸಾಮಾನ್ಯ 3,200 ಲೀ. ಪೆಟ್ರೋಲ್ ಮತ್ತು 3,600 ಲೀ. ಡೀಸೆಲ್ ಮಾರಾಟವಾಗುತ್ತಿದ್ದ ಬಂಕ್‌ಗಳಲ್ಲಿ ಈಗ 800 ಲೀ.ನಿಂದ 1,200 ಲೀ. ತನಕ ತೈಲ ಮಾರಾಟವಾಗುತ್ತಿದೆ.
ಕೇರಳದ ಹೆಚ್ಚಿನ ಪೆಟ್ರೋಲ್ ಬಂಕ್‌ಗಳ ಸ್ಥಿತಿ ಇದೇ ಆಗಿದ್ದು, ಬೆಲೆ ವ್ಯತ್ಯಾಸ ಮುಂದುವರಿದರೆ ತೆರಿಗೆ, ವಿದ್ಯುತ್ ದರ, ನಿರ್ವಹಣೆ ವೆಚ್ಚ ಭರಿಸಲು ಕಾರ್ಮಿಕರ ವೇತನ ನೀಡಲು ಸಾಧ್ಯವಾಗದೆ ಹೆಚ್ಚಿನ ಪೆಟ್ರೋಲ್ ಬಂಕ್‌ಗಳು ಮುಚ್ಚಬೇಕಾದ ಸ್ಥಿತಿ ಬರಬಹುದು.
ಕರ್ನಾಟಕದಿಂದ ಡೀಸೆಲ್ ತುಂಬಿಸಿ ಕೇರಳ ಪ್ರವೇಶಿಸುವ ಸರಕು ಲಾರಿಗಳು ಬಳಿಕ ಕರ್ನಾಟಕಕ್ಕಿಂತಲೂ ಬೆಲೆ ಕಡಿಮೆ ಇರುವ ಕೇಂದ್ರಾಡಳಿತ ಪ್ರದೇಶ ಮಾಹೆ (ಪುದುಚೇರಿ)ಯಲ್ಲಿ ಟ್ಯಾಂಕ್ ಭರ್ತಿ ಮಾಡುತ್ತಿವೆ. ಮಾಹೆಯಿಂದ ಕನಿಷ್ಠ ಎರ್ನಾಕುಳಂ ಜಿಲ್ಲೆಯ ತನಕ ಸಾಗಿ ಹಿಂತಿರುಗುವ ಲಾರಿಗಳು ಮಾಹೆಯಲ್ಲಿ ಪುನಃ ಡೀಸೆಲ್ ಭರ್ತಿಗೊಳಿಸಿದರೆ ಕರ್ನಾಟಕ ಗಡಿ ತಲುಪಬಹುದು.
ತಲಪಾಡಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಎದುರು ಕರ್ನಾಟಕದ ಪೆಟ್ರೋಲ್ ಪಂಪ್ ಕಾರ್ಯಾಚರಿಸುತ್ತಿದ್ದು, ತಲಪಾಡಿ ಗಡಿತನಕ ಸರ್ವಿಸ್ ನಡೆಸುವ ಕೇರಳದ ಖಾಸಗಿ ಬಸ್‌ಗಳು ಅಲ್ಲಿ ಡೀಸೆಲ್ ತುಂಬಿಸಿ ಮತ್ತೆ ಕೇರಳ ಪ್ರವೇಶಿಸುತ್ತಿವೆ. ಕೇರಳದಲ್ಲಿ ಬೆಲೆ ಕಡಿಮೆ ಇದ್ದಾಗ ಪೆರ್ಲದಲ್ಲಿ ಡೀಸೆಲ್ ತುಂಬಿಸುತ್ತಿದ್ದ ಪುತ್ತೂರು-ಪೆರ್ಲ-ವಿಟ್ಲ ಸರ್ವಿಸ್ ನಡೆಸುವ ಕರ್ನಾಟಕ ನೋಂದಾಯಿತ ಖಾಸಗಿ ಬಸ್‌ಗಳು ಮತ್ತೆ ಕರ್ನಾಟಕದ ಪಂಪ್‌ಗಳನ್ನೇ ಆಶ್ರಯಿಸುತ್ತಿವೆ. ಕರ್ನಾಟಕ ಗಡಿ ತನಕ ಸಾಗಲು ಬೇಕಾದ ಇಂಧನ ತುಂಬಿಸಿ ಬರುವ ಕೇರಳದ ಟ್ಯಾಕ್ಸಿ, ಖಾಸಗಿ ವಾಹನಗಳು ಕರ್ನಾಟಕ ಗಡಿಯಲ್ಲಿ ಟ್ಯಾಂಕ್ ಭರ್ತಿ ಮಾಡುತ್ತಿವೆ.
ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಸೋಮವಾರ ರಾತ್ರಿ ಪೆಟ್ರೋಲ್‌ಗೆ 105.50 ಹಾಗೂ ಡೀಸೆಲ್‌ಗೆ 92.69 ರೂ. ಇತ್ತು. 9 ಕಿ.ಮೀ.ದೂರದ ಕರ್ನಾಟಕ ಗಡಿಭಾಗದ ಅಡ್ಯನಡ್ಕದಲ್ಲಿ ಪೆಟ್ರೋಲ್‌ಗೆ 100.11 ಹಾಗೂ ಡೀಸೆಲ್‌ಗೆ 84.56 ರೂ. ಇತ್ತು. ಕೇರಳ ಹಾಗೂ ಕರ್ನಾಟಕಕ್ಕೆ ಹೋಲಿಸಿದಾಗ ಪೆಟ್ರೋಲ್‌ಗೆ 5 ರೂ. ಹಾಗೂ ಡೀಸೆಲ್‌ಗೆ 8 ರೂ. ಅಂತರವಿದ್ದು, ಇಂಧನ ತುಂಬಿಸಲೆಂದೇ ಕರ್ನಾಟಕ ತೆರಳಿದರೂ ನಷ್ಟ ಉಂಟಾಗದು.
Kshetra Samachara
11/11/2021 02:30 pm