ಅನಂತಾಡಿ ಗ್ರಾಮದ ವಿಜಯ ಎಂಬವರಿಗೆ 94ಸಿ ಅಡಿಯಲ್ಲಿ 2014-15ರಲ್ಲಿ ಹಕ್ಕುಪತ್ರ ನೀಡಿದ್ದು, ಈಗ ಏಕಾಏಕಿ ಅವರ ಮನೆಯಂಗಳಕ್ಕೆ ಜೆ.ಸಿ.ಬಿ. ನುಗ್ಗಿಸಿ ಅಡಿಕೆ ಗುಂಡಿ ತೆಗೆಯಲಾಗಿದೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ ಹಿನ್ನಲೆ ಆ.23ರಂದು 10.30ರಿಂದ ವಿಟ್ಲ ನಾಡಕಛೇರಿ ಮುಂದೆ ನ್ಯಾಯ ಕೇಳಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಹೇಳಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ಅವರ ಜಾಗ ಮಂಜೂರಾದ ವಿಚಾರವನ್ನು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ದಾವೆ ಹೂಡಿ ಮಹಿಳೆಗೆ ವಿಚಾರವೇ ತಿಳಿಯದಂತೆ ಪ್ರಕರಣ ಇತ್ಯರ್ಥ ಮಾಡಿದ್ದಾರೆ. 8ಸೆಂಟ್ಸ್ ಜಾಗದಲ್ಲಿದ್ದ ಕೃಷಿಯನ್ನು ನಾಶ ಪಡಿಸಿ ಅಡಿಕೆ ಗುಂಡಿ ತೆಗೆಯಲಾಗಿದೆ.
ಕಂದಾಯ ನಿರೀಕ್ಷಕರಿಗೆ ಹಾಗೂ ಗ್ರಾಮ ಕರಣಿಕರಿಗೆ ಈ ಬಗ್ಗೆ ದೂರು ನೀಡಿದರೂ, ತುರ್ತು ಕ್ರಮಕ್ಕೆ ಮುಂದಾಗಿಲ್ಲ. ಮಕ್ಕಳಿಲ್ಲದ ಬಡ ಕುಟುಂಬವನ್ನು ಬೀದಿ ಪಾಲು ಮಾಡಲು ಹೊರಟ ಕಂದಾಯ ಇಲಾಖೆಯ ವಿರುದ್ಧ ಈ ಪ್ರತಿಭಟನೆ ನಡೆಯಲಿದೆ. ತಹಸೀಲ್ದಾರರು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ದ.ಕ. ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಚಂದ್ರಶೇಖರ ಎ, ನೊಂದ ಮಹಿಳೆ ವಿಜಯ ಸುಂದರ್ ಮಡಿವಾಳ್, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಯು, ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು
Kshetra Samachara
19/08/2022 06:24 pm