ಉಡುಪಿ: ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರ ಆರೋಗ್ಯ ಸುಧಾರಣೆ ಮತ್ತು ಪುರ್ನವಸತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಜಿಲ್ಲಾ ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಚ್ 2019ರಿಂದ ಹೊಸದಾಗಿ ಗುರುತಿಸಲಾಗಿರುವ 110 ಮಂದಿ ಎಂಡೋಸಲ್ಫಾನ್ ಬಾಧಿತರ ಪಟ್ಟಿಗೆ ಅನುಮೋದನೆ ನೀಡಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಸಚಿವರು, ಎಂಡೋಪೀಡಿತರಿಗೆ ಉಚಿತ ಪಡಿತರ ನೀಡುವ ಕುರಿತು ಆರೋಗ್ಯ ಇಲಾಖೆಯಿಂದ ಭಾದಿತರ ಪಟ್ಟಿ ಪಡೆದು, ಅವರಿಗೆ ಅಂತ್ಯೋದಯ ಕಾರ್ಡ್‌ಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಎಂಡೋಸಲ್ಫಾನ್ ಸಂಬಂಧಿಸಿ ಯಾವುದೇ ನ್ಯೂನತೆಗಳು ಕಂಡುಬಂದರೆ ಎಸ್.ಓ.ಪಿ ಯನ್ನು ರಚಿಸಿ ಅದರನ್ವಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು. ಕುಂದಾಪುರದ ಸೇನಾಪುರದಲ್ಲಿ ಶಾಶ್ವತ ಪುರ್ನವಸತಿ ಕೇಂದ್ರ ಆರಂಭ, ಜಿಲ್ಲೆಯಲ್ಲಿ ಪ್ರತ್ಯೇಕ ಡೇ ಕೇರ್ ಸೆಂಟರ್ ಆರಂಭದ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್.,ಮಾನವ ಹಕ್ಕು ಪ್ರತಿಷ್ಠಾನದ ಡಾ. ರವೀಂದ್ರನಾಥ್ ಶಾನುಭೋಗ್, ಅರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/09/2022 01:31 pm