ಸುಳ್ಯ: ರಾಜ್ಯದಲ್ಲಿ ವಸತಿ ಯೋಜನೆ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದೆ. ಇಡೀ ರಾಜ್ಯಕ್ಕೆ ಒಂದೇ ಸಾಫ್ಟ್ ವೇರ್ ಆರಂಭಿಸಿ ನಿಜವಾದ ಬಡವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 7 ಸಾವಿರ ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಪಾರದರ್ಶಕವಾಗಿ ಮಾಡಲಾಗಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ 5 ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಕ್ಕೆ, 1 ಲಕ್ಷ ಮನೆಗಳನ್ನು ನಗರ ಪ್ರದೇಶಕ್ಕೆ ನೀಡಲಾಗಿದೆ. 5 ಲಕ್ಷ ಮನೆಗಳಲ್ಲಿ 2 ಲಕ್ಷದ 34 ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ಹಿಂದಿನ ಸರಕಾರದ ಕಾಲದಲ್ಲಿ ಬಾಕಿ ಉಳಿದ 10 ಲಕ್ಷ ಮನೆಗಳು ನಿರ್ಮಾಣಗೊಳ್ಳಲಿದೆ. ಇದರಲ್ಲಿ 6 ಲಕ್ಷ ಮನೆಗಳ ನಿರ್ಮಾಣ ಈಗಾಗಲೇ ಪೂರ್ತಿಯಾಗಿದೆ. ಉಳಿದ ಮನೆಗಳನ್ನು ಪೂರ್ತಿ ಮಾಡಿ ಮಾರ್ಚ್ ಒಳಗೆ ಎಲ್ಲಾ 16 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ- ಪಂಗಡದವರಿಗೆ ಆದಾಯ ಮಿತಿಯನ್ನು 2 ಲಕ್ಷಕ್ಕೆ ಏರಿಸಲಾಗಿದೆ. ಇತರ ಹಿಂದುಳಿದ ವರ್ಗದವರಿಗೆ ವಾರ್ಷಿಕ ಆದಾಯವನ್ನು 1 ಲಕ್ಷದ 20 ಸಾವಿರಕ್ಕೆ ಏರಿಸಲಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಸರಕಾರದಿಂದ ಅನುಕೂಲ ಮಾಡಿ ಕೊಡಲಾಗಿದೆ ಎಂದರು.
ನೆರೆ ಇತ್ಯಾದಿಗಳಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲು ಎ ಬಿ ಸಿ ಎಂಬ ವಿಂಗಡಣೆ ಇತ್ತು. ಅದನ್ನು ತೆಗೆದುಹಾಕಿ ಸರಳೀಕರಣಗೊಳಿಸಲಾಗಿದೆ. ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
ಕುಕ್ಕೆ ದೇವಸ್ಥಾನ ಭೇಟಿ: ಈ ಮೊದಲು ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಜತೆಗಿದ್ದರು.
Kshetra Samachara
27/08/2022 10:51 pm