ಉಡುಪಿ: "ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಹೆಸರಲ್ಲಿ ಮೂರು ನಾಲ್ಕು ತಲೆಮಾರಿಗೆ ಆಗುವಷ್ಟನ್ನು ನಾವು ಮಾಡಿಕೊಂಡಿದ್ದೇವೆ...' ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗಂಟಾಘೋಷದ ನುಡಿ ಮುತ್ತುಗಳು ಕಾಂಗ್ರೆಸ್ ಈ ದೇಶವನ್ನು ಲೂಟಿಗೈದು ದೇಶವಾಸಿಗಳಿಗೆ ಎಸಗಿರುವ ಅಕ್ಷಮ್ಯ ಘೋರ ದ್ರೋಹವನ್ನು ಪುಷ್ಠೀಕರಿಸಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಆರೋಪಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಮುಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಸ್ವತ: ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಇಂತಹ ಹೇಳಿಕೆ ನೀಡಿರುವುದು ಕಾಂಗ್ರೆಸ್‌ನ ಮುಖವಾಡವನ್ನು ಕಳಚಿ ಅಧ:ಪತನಕ್ಕೆ ನಾಂದಿ ಹಾಡಿದಂತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹಾಗೂ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಹಲವಾರು ರಾಷ್ಟ್ರಗಳ ವಿಷಮ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಕೆಲವೊಂದು ದೂರದರ್ಶಿತ್ವದ ನಿರ್ಧಾರಗಳು ಕಹಿ ಎನಿಸಿದರೂ ದೇಶ ಹಿತಕ್ಕೆ ಪೂರಕವಾಗಿವೆ ಎಂದು ಅವರು ತಿಳಿಸಿದ್ದಾರೆ.
Kshetra Samachara
22/07/2022 05:54 pm