ಮಂಗಳೂರು: ಜನಪ್ರತಿನಿಧಿಗಳು ವಿವೇಕಯುತವಾಗಿ ಮಾತನಾಡಬೇಕೇ ಹೊರತು ಅವಿವೇಕಿಗಳಂತೆ ಹೇಳಿಕೆಗಳನ್ನು ನೀಡಿ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಖಾರವಾಗಿ ಪ್ರತಿಕ್ರಿಯಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುವವರ ಆಸ್ತಿ ಮುಟ್ಟುಗೋಲು ಹಾಕಬೇಕೆಂದು ಹೇಳಿಕೆ ನೀಡಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕಾನೂನು ಜಾರಿ ಮಾಡಬೇಕೆಂದಿದ್ದರೆ ಸಚಿವ ಮಾಧುಸ್ವಾಮಿಯವರಲ್ಲಿ ಹೇಳಲಿ. ಪಾರ್ಲಿಮೆಂಟ್‌ನಲ್ಲಿ ಯಾಕೆ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಚರ್ಚೆ ಮಾಡೋಲ್ಲ. ಅದರ ಬದಲು ಜನರ ಮಧ್ಯೆ ಗೊಂದಲ ಸೃಷ್ಟಿಸುವ ಅಗತ್ಯವೇನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಲ್ಕೊರೆತ, ಮಳೆ ಹಾನಿ ವೇಳೆ ಮನೆಯಿಂದ ಹೊರಡದವರು ಜನರ ಧಿಕ್ಕು ತಪ್ಪಿಸಲು ಅವಿವೇಕದ ಹೇಳಿಕೆ ನೀಡುತ್ತಿದ್ದಾರೆ. ಡಾ.ವೈ.ಭರತ್ ಶೆಟ್ಟಿಯವರು ಶಾಸಕರೇ ಹೊರತು ಸ್ಥಳೀಯ ನಾಯಕನಲ್ಲ. ಯಾಕೆ ಅವರು ಈ ಬಗ್ಗೆ ಪಾರ್ಲಿಮೆಂಟ್‌ಗೆ ಪತ್ರ ಬರೆದಿಲ್ಲ. ಯಾಕೆ ಇದನ್ನು ಸಂಸತ್ತಿನಲ್ಲಿ ಚರ್ಚಿಸಿಲ್ಲ. ಜನರ ಮಧ್ಯೆ ಗೊಂದಲವಿದ್ದಾಗ ಜನಪ್ರತಿನಿಧಿಗಳು ಅದನ್ನು ಪರಿಹರಿಸಲು ಯತ್ನಿಸಬೇಕು. ಕಾನೂನು ವ್ಯಾಪ್ತಿಯಲ್ಲಿ ನಿರ್ದಿಷ್ಟವಾದ ನಿಯಮಗಳನ್ನು ತಂದರೆ ಯಾವುದೇ ತೊಂದರೆ ಬರುವುದಿಲ್ಲ. ಅದು ಬಿಟ್ಟು ಈ ರೀತಿಯಲ್ಲಿ ಹೇಳಿಕೆ ನೀಡುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಖಾದರ್ ಹೇಳಿದರು.
Kshetra Samachara
08/07/2022 07:36 pm