ಮಣಿಪಾಲ: ಉಡುಪಿಯ ಕಟಪಾಡಿಯ ಬಿಲ್ಲವರ ಶಕ್ತಿಕೇಂದ್ರ ಶ್ರೀ ವಿಶ್ವನಾಥ ಕ್ಷೇತ್ರದಿಂದಲೇ ಇವತ್ತು ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ರಣಕಹಳೆ ಮೊಳಗಿತು. ಇದೇ ಮೊದಲ ಬಾರಿಗೆ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದೇ ಕಡೆ ಪ್ರತಿಭಟನೆ ದಾಖಲಿಸಿದ್ದು ವಿಶೇಷವಾಗಿತ್ತು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರೀ ಸಂಖ್ಯೆಯ ಬಿಲ್ಲವ ಬಾಂಧವರು ಪಕ್ಷಭೇಧ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜಿಲ್ಲೆಯ ಬಿಲ್ಲವ ಮುಖಂಡರು ಮತ್ತು ರಾಜಕೀಯ ಮುಖಂಡರು ,ಈ ತಪ್ಪನ್ಬು ಸರಿಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ನಾರಾಯಣ ಗುರುಗಳು ಅಸ್ಪೃಶ್ಯ ಸಮಾಜಕ್ಕೆ ಬೆಳಕು ನೀಡಿದವರು. ಅವರ ಪಠ್ಯವನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ. ಈ ತಪ್ಪನ್ನು ಸರಕಾರ ಸರಿಪಡಿಸಬೇಕು. ಪಠ್ಯಪುಸ್ತಕ ಸಮಿತಿಗೆ ಪರಿಶೀಲನೆಗೆ ಹೇಳಿದರೆ ಅವರು ಪರಿಷ್ಕರಣೆ ಮಾಡಿದ್ದಾರೆ. ಇದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪ್ರತಿಭಟನೆ ಮೂಲಕ ರವಾನಿಸಲಾಯಿತು.
ಇದಕ್ಕೂ ಮುನ್ನ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಸಮಾಜದ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂಬುದು ಗಮನಾರ್ಹ ಸಂಗತಿ.
Kshetra Samachara
08/07/2022 12:30 pm