ಸುರತ್ಕಲ್: ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಸುರತ್ಕಲ್ ಬಳಿಯ ಎನ್ ಐಟಿಕೆ ಟೋಲ್ ಗೇಟ್ ಅನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದಂತೆ ಮುಚ್ಚಿಸುವ ಗಡುವು ಹತ್ತಿರ ಬರುತ್ತಿದ್ದರೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನಾಟಕ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ಟೋಲ್ ವಿರೋಧಿ ಹೋರಾಟಗಾರರ ಮೇಲೆ ಕಮಿಷನ್ ಆರೋಪ ಮಾಡಿರುವ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿಗೆ ಟೋಲ್ ನಿಂದ ಪ್ರತೀ ತಿಂಗಳು ಹಣದ ಸೂಟ್ ಕೇಸ್ ಸಿಗುತ್ತಿದೆ.
ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿರುವ ಟೋಲ್ ಗೇಟ್ ಪರ ನಿಂತಿರುವ ಶಾಸಕ ಭರತ್ ಶೆಟ್ಟಿ ಟೋಲ್ ಸಮೀಪ ರೋಡಲ್ಲಿ ಟವೆಲ್ ಹಾಕಿ ಭಿಕ್ಷೆ ಬೇಡಲಿ" ಎಂದು ಕಾಂಗ್ರೆಸ್ ನಾಯಕಿ ಟೋಲ್ ವಿರೋಧಿ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಕಿಡಿಕಾರಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತಾಡುತ್ತಿದ್ದ ಪ್ರತಿಭಾ, "ಸುರತ್ಕಲ್ ಅಕ್ರಮ ಟೋಲ್ ಗೇಟ್ ನಿಂದ ಸ್ಥಳೀಯ ಶಾಸಕ ವೈ. ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ದೊಡ್ಡಮಟ್ಟದ ಲಾಭವಿದೆ. ಇಲ್ಲಿ ಅವರದ್ದೇ ಗೂಂಡಾ ಪಡೆಯನ್ನು ನಿಯೋಜನೆ ಮಾಡಿದ್ದಾರೆ. ಅದಕ್ಕಾಗಿ ಟೋಲ್ ರದ್ದು ಮಾಡುವುದಾಗಿ ಹೇಳಿರುವ ದಿನ ಹತ್ತಿರ ಬಂದಾಗ ಜನರ ಗಮನ ಬೇರೆಡೆ ಸೆಳೆಯಲು ಹೋರಾಟಗಾರರ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ.
ಕೇಂದ್ರ, ರಾಜ್ಯ ಸರಕಾರಗಳು ಇವರದ್ದೇ, ಕೇಂದ್ರ ಸಚಿವ ಗಡ್ಕರಿಯವರು ನಳಿನ್ ಕುಮಾರ್ ಕಟೀಲ್ ಆತ್ಮೀಯ ಸ್ನೇಹಿತ ಕೂಡಾ. ಎಂ.ಪಿ., ಎಂ.ಎಲ್.ಎ. ಎಲ್ಲವೂ ಬಿಜೆಪಿಯದ್ದೇ ಇರುವಾಗ ಅಕ್ರಮ ಟೋಲ್ ರದ್ದು ಮಾಡಬೇಕಿರುವುದು ಯಾರು?" ಎಂದು ಪ್ರಶ್ನಿಸಿದ್ದಾರೆ. ಗುತ್ತಿಗೆ ಕಾಮಗಾರಿಗಳಲ್ಲಿ 40% ಗುತ್ತಿಗೆ ಪಡೆಯುತ್ತಿರುವ ಬಿಜೆಪಿ ನಾಯಕರು ಎಲ್ಲರನ್ನು ಇವರಂತೆಯೇ ಕಮಿಷನ್ ಗಿರಾಕಿಗಳು ಎಂದುಕೊಂಡಿದ್ದಾರೆ.
ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಜನಸಾಮಾನ್ಯರಿಗೆ ಬೇಡವಾದ ಟೋಲ್ ಅನ್ನು ಕೂಡಲೇ ರದ್ದು ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಲಿ" ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.
Kshetra Samachara
18/06/2022 04:42 pm