ವಿಟ್ಲ: ಸಾಲೆತ್ತೂರಿನಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಸಂಘ ಪರಿವಾರವು ಸಮಾಜದಲ್ಲಿ ಕೋಮು ದ್ವೇಷ ಸೃಷ್ಟಿಸಿ, ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದೆ ಎಂದು ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದ್ದಾರೆ.
ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುಮಗ ಹಾಕಿದ ಡ್ರೆಸ್ ಕೋಡ್ ಗೂ ಕೊರಗ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಹಲವು ದಲಿತ ಸಮುದಾಯದ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ʼಮುಸ್ಲಿಂ ಮದುಮಗʼ ಎಂಬ ಕಾರಣಕ್ಕೆ ಸಂಘ ಪರಿವಾರವು, ಇಡೀ ಮುಸ್ಲಿಂ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಟ್ಟಹಾಸ ಮೆರೆಯುತ್ತಿದ್ದು, ಪೊಲೀಸರೂ ಇವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಕ್ರಿಮಿನಲ್ ಹಿನ್ನೆಲೆಯಿರುವ ಸಂಘ ಪರಿವಾರದ ಗೂಂಡಾ ನಾಯಕ ಶರಣ್ ಪಂಪ್ ವೆಲ್, ಇಲ್ಲಿನ ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳಿಗೆ "ನೀವು ಇಂತಹ ಕೆಲಸ ಮಾಡದಂತೆ ಮುಸ್ಲಿಂ ಯುವಕರಿಗೆ ಫತ್ವಾ ಹೊರಡಿಸಬೇಕು" ಎಂದು ಹೇಳುತ್ತಾರೆ. ಇಲ್ಲಿನ ಧಾರ್ಮಿಕ ಗುರುಗಳಿಗೆ ಸ್ಪಷ್ಟ ಜ್ಞಾನವಿದೆ. ಅವರು ಈಗಾಗಲೇ ಸ್ಪಷ್ಟ ನಿಲುವು ಕೂಡ ವ್ಯಕ್ತಪಡಿಸಿದ್ದಾರೆ. ಶರಣ್ ಪಂಪ್ ವೆಲ್ ಯಾವ ನೈತಿಕತೆ ಮೇಲೆ ಮುಸ್ಲಿಂ ಧರ್ಮಗುರುಗಳಿಗೆ ಬುದ್ಧಿವಾದ ಹೇಳುತ್ತಾರೆ?" ಎಂದು ಪ್ರಶ್ನಿಸಿದರು.
Kshetra Samachara
13/01/2022 02:40 pm