ವರದಿ: ರಹೀಂ ಉಜಿರೆ
ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿನ್ನೆಯಿಂದ ಆಸ್ಪತ್ರೆ ಮುಂದೆ ಧರಣಿ ಕುಳಿತಿದ್ದಾರೆ. ಇವತ್ತು ಬೂಟ್ ಪಾಲಿಷ್ ಮಾಡಿ ಪ್ರತಿಭಟಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲು ಯತ್ನಿಸಿದರು.
ಹೌದು... ಉಡುಪಿ ಜಿಲ್ಲಾಸ್ಪತ್ರೆಯ
ಡಯಾಲಿಸಿಸ್ ಘಟಕದ ಸಮಸ್ಯೆ ಬಗೆಹರಿಯುವಂತೆ ಕಾಣಿಸುತ್ತಿಲ್ಲ. ಸದ್ಯ ಇಲ್ಲಿ ಹತ್ತು ಡಯಾಲಿಸಿಸ್ ಯಂತ್ರಗಳಿದ್ದು, ಈ ಪೈಕಿ ಐದು ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ. ಉಳಿದ ಐದು ಯಂತ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ.
ಈ ನಡುವೆ ಕಳೆದ ಐದು ತಿಂಗಳಿನಿಂದ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ. ಅವರು ಯಾವುದೇ ಕ್ಷಣಕ್ಕೂ ಕರ್ತವ್ಯ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರವೇ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಗಡುವು ನೀಡಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಸತ್ಯಾಗ್ರಹ ನಡೆಸಿದ್ದು, ಇಂದು ಬೂಟ್ ಪಾಲಿಷ್ ಮಾಡಿ ಹಣ ಸಂಗ್ರಹಿಸಿತು.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಡಯಾಲಿಸಿಸ್ ಗೆ ಅಗತ್ಯವಿರುವ ರಾಸಾಯನಿಕ ಸಾಮಗ್ರಿ, ಫಿಲ್ಟರ್‌ಗಳು ಸಂಪೂರ್ಣ ಖಾಲಿ ಯಾಗಿರುವುದು ಗಂಭೀರ ವಿಚಾರ. ಇದರಿಂದಾಗಿ
ಬಡರೋಗಿಗಳು ಹಲವು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಸಾವು-ನೋವು ಸಂಭವಿಸುವ ದಿನಗಳು ದೂರವಿಲ್ಲ, ಕೆಲವು ದಿನಗಳ ಹಿಂದೆ ಆರೋಗ್ಯವಾಗಿದ್ದ ವ್ಯಕ್ತಿಯೊಬ್ಬರು ಇಲ್ಲಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಸರಕಾರ ಹಣ ಇಲ್ಲ ಎಂದು ಕೈಚೆಲ್ಲಿದ್ದು, ಇದು ನಾಚಿಕೆಗೇಡು. ನಾವೇ ಬೂಟ್ ಪಾಲಿಶ್ ಮಾಡಿ ಹಣ ನೀಡುತ್ತೇವೆ ಎಂದು ಪ್ರತಿಭಟನೆಕಾರರು ಹೇಳಿದ್ದಾರೆ.
ಸದ್ಯ ತಿಂಗಳಿಗೆ 90ರಷ್ಟು ರೋಗಿಗಳು ಡಯಾಲಿಸಿಸ್ ಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಸರಕಾರ ಬಡಜನರ ಆರೋಗ್ಯ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಬೇಕು ಎಂದು ಕರವೇ ಆಗ್ರಹಿಸಿದೆ.
Kshetra Samachara
17/11/2021 08:48 pm