ಉಡುಪಿ: ವಿಧಾನ ಪರಿಷತ್ ಸಭಾಪತಿಯಾಗಿದ್ದ ಪ್ರತಾಪಚಂದ್ರ ಶೆಟ್ಟಿ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಉಡುಪಿಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಕುತೂಹಲ ಮೂಡಿದೆ. ಡಿ.ಕೆ .ಶಿವಕುಮಾರ್ ಆಪ್ತರಾಗಿರುವ ಬೈಂದೂರು ಮೂಲದ ಯು.ಬಿ. ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇವರು ಧಾರವಾಡದಲ್ಲಿ ನೆಲೆಸಿರುವ ಗುತ್ತಿಗೆದಾರ.
ಡಿಕೆಶಿ ಆಪ್ತ ಎಂಬ ಕಾರಣಕ್ಕೆ ಯು.ಬಿ.ಶೆಟ್ಟಿ ಯವರ ಮನೆ ಮೇಲೆ ಇತ್ತೀಚೆಗಷ್ಟೇ ಐಟಿ ದಾಳಿ ನಡೆದಿತ್ತು. ಧಾರವಾಡ ಮಾತ್ರವಲ್ಲದೆ, ಉಡುಪಿ ಜಿಲ್ಲೆಯಲ್ಲಿರುವ ಅವರ ಮನೆಗಳಿಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಯು.ಬಿ. ಶೆಟ್ಟಿ, ಡಿ.ಕೆ. ಶಿವಕುಮಾರ್ ಆಪ್ತರು ಮತ್ತು ಪರಿಷತ್ತು ಚುನಾವಣೆಗೆ ಸಂಭಾವ್ಯ ಅಭ್ಯರ್ಥಿ ಎಂಬ ಕಾರಣಕ್ಕೆ ಈ ದಾಳಿ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಜಾತಿ ಮತ್ತು ಹಣ ಬಲ ಇರುವ ಯು.ಬಿ. ಶೆಟ್ಟಿ ಹೆಸರು ಮುಂಚೂಣಿಯಲ್ಲಿದ್ದರೆ, ಉಳಿದಂತೆ ದ.ಕ. ಜಿಲ್ಲೆಯ ಮಂಜುನಾಥ ಭಂಡಾರಿ ಸಹಿತ 12 ಮಂದಿ ಆಕಾಂಕ್ಷಿಗಳು ಕಾಂಗ್ರೆಸ್ ನಲ್ಲಿದ್ದಾರೆ. ಅಭ್ಯರ್ಥಿಯ ಗೆಲುವಿಗೆ ಸುಮಾರು 400 ಮತಗಳ ಕೊರತೆ ಕಾಂಗ್ರೆಸ್ ಗಿದೆ. ಇದನ್ನು ಇತರ ಪಕ್ಷಗಳಿಂದ ಮತ್ತು ಪಕ್ಷೇತರರಿಂದ ಹೊಂದಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು 'ಪಬ್ಲಿಕ್ ನೆಕ್ಸ್ಟ್' ಗೆ ಹೇಳಿದ್ದಾರೆ.
Kshetra Samachara
11/11/2021 02:46 pm