ಮುಲ್ಕಿ: ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಅಪಘಾತ ಜೀವಹಾನಿ,ಅನುದಾನ ವಿತರಣೆಯಲ್ಲಿ ತಾರತಮ್ಯ, ,ಬಾರದ ಸಂಸದರ ಅನುದಾನ,ಶನಿವಾರ ಸಂತೆ ಆರಂಭಿಸುವ ಮತ್ತಿತರ ವಿಷಯಗಳ ಬಗ್ಗೆ ಮುಲ್ಕಿ ನಗರ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಮೂಲ್ಕಿ ನ ಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೂಲ್ಕಿ ಕಾರ್ನಾಡು ಶನಿವಾರದ ಸಂತೆಯನ್ನು ಪುನರಾರಂಭಿಸಲು ತೀರ್ಮಾನಿಸಲಾಯಿತು.
ಮುಲ್ಕಿ ನ ಪಂ ಗೆ ಸಂಸದರಿಂದ ಯಾವುದೇ ಅನುದಾನ ಬಂದಿಲ್ಲ,ನಗರಾಭಿವೃದ್ಧಿಗೆ ಸಂಸದರು ಮತ್ತು ಶಾಸಕರ ಅನುದಾನಗಳ ಬಗ್ಗೆ ಪ್ರತಿಪಕ್ಷ ಸದಸ್ಯರಾದ ಯೋಗೀಶ್ ಕೋಟ್ಯಾನ್, ಪುತ್ತುಬಾವ, ಮಂಜುನಾಥ ಕಂಬಾರ ಮತ್ತು ವಿಮಲಾ ಪೂಜಾರಿ ಪ್ರಶ್ನಿಸಿ ತೀವ್ರ ವಾಗ್ದಾಳಿ ನಡೆಸಿ
ನಗರಾಭಿವೃದ್ಧಿಗೆ ಹೆಚ್ಚು ಅನುದಾನಗಳನ್ನು ತರಿಸುವಂತೆ ಆಗ್ರಹಿಸಿದರು.
ಈ ಬಗ್ಗೆ ಅಧ್ಯಕ್ಷ ಸುಭಾಷ್ ಶೆಟ್ಟಿ ಉತ್ತರಿಸಿ ಮುಖ್ಯಮಂತ್ರಿಗಳನ್ನು ನಿಯೋಗ ಭೇಟಿಯಾಗಿದ್ದು, ಶೀಘ್ರ ಅನುದಾನದ ಭರವಸೆ ನೀಡಿದ್ದಾರೆ. ನಗರೋತ್ತಾನ ಮೂಲಕ ತಕ್ಷಣ ಅನುದಾನದ ನಿರೀಕ್ಷೆಯಿದೆ ಎಂದರು.
ವಿವಿಧ ವಾರ್ಡ್‌ಗಳ ಅಭಿವೃದ್ಧಿ ಸಂದರ್ಭ ತಾರತಮ್ಯ ಮಾಡುತ್ತಿದ್ದಾರೆಂದು ಪ್ರತಿಪಕ್ಷ ಸದಸ್ಯರು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಅನುದಾನ ವಿಂಗಡಣೆ ಸಂದರ್ಭ ಎಲ್ಲಾ ವಾರ್ಡ್‌ಗಳಿಗೆ ಸಮಾನ ಹಂಚಿಕೆ ಮಾಡುವಂತೆ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಕೊಕ್ಕರಕಲ್ ಬಳಿಯ ಅವೈಜ್ಞಾನಿಕ ಹೆದ್ದಾರಿ ಡಿವೈಡರ್ ಕಾಮಗಾರಿಯಿಂದ ಅನೇಕ ಅಪಘಾತಗಳು ಸಂಭವಿಸಿದ್ದು ಹೆದ್ದಾರಿ ಸಮರ್ಪಕ ಕಾಮಗಾರಿಗೆ ಸದಸ್ಯರು ಆಗ್ರಹಿಸಿ ಹೆದ್ದಾರಿ ಇಲಾಖೆಯವರು ಅನೇಕ ಅಪಘಾತಗಳು ಸಂಭವಿಸುತ್ತಿರುವ ಡಿವೈಡರ್ ಬಳಿಯ ತೋಡು ಮುಚ್ಚದಿದ್ದರೆ ನಾವು ಮುಚ್ಚುತ್ತೇವೆ ಎಂದು ಸವಾಲು ಹಾಕಿದರು.
ಈ ಸಂದರ್ಭ ಹೆದ್ದಾರಿ ನವಯುಗ್ ಗುತ್ತಿಗೆದಾರ ಕಂಪನಿಯ ಪರವಾಗಿ ಆಗಮಿಸಿದ ಶೈಲೇಶ್ ಕುಮಾರ್ ಅಪಘಾತ ಸಂಭವಿಸಿದ ಸ್ಥಳಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು.
ಹೆದ್ದಾರಿ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬ, ದಾರಿದೀಪ ಅವ್ಯವಸ್ಥೆ ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಲಾಯಿತು.
ಮನೆ ದುರಸ್ತಿಗೆ ನಪಂ ವಿಧಿಸುತ್ತಿರುವ ಅಭಿವೃದ್ಧಿ ಶುಲ್ಕವನ್ನು ಕಡಿಮೆ ಮಾಡುವಂತೆ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಶೆ.80ರಿಂದ ಶೆ.50ಕ್ಕೆ ಇಳಿಸಲು ಸಭೆ ನಿರ್ಣಯಿಸಿತು.
ಮೂಲ್ಕಿಯ ಸೈಂಟ್ ಆನ್ಸ್ ನರ್ಸಿಂಗ್ ವಸತಿ ನಿಲಯದ ಶೌಚಾಲಯದ ತ್ಯಾಜ್ಯ ನೀರನ್ನು ಹೊರಕ್ಕೆ ಬಿಡುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಸದ್ಯರಾದ ಯೊಗೀಶ್ ಕೋಟ್ಯಾನ್ ಮತ್ತು ಹರ್ಷರಾಜ್ ಶೆಟ್ಟಿ ಸಭೆಯಲ್ಲಿ ಪ್ರಸ್ತಾವಿಸಿದರು.
ಈ ಬಗ್ಗೆ ನರ್ಸಿಂಗ್ ಕಾಲೇಜಿಗೆ ಈಗಾಗಲೇ ನೋಟೀಸ್ ನೀಡಲಾಗಿದ್ದು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಾಧಿಕಾರಿ ಚಂದ್ರ ಪೂಜಾರಿ ತಿಳಿಸಿದರು.
ಘನ ತ್ಯಾಜ್ಯ ನಿರ್ವಹಣಾ ಶುಲ್ಕ, ಅದಾನಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಅವ್ಯವಸ್ಥೆ, ಮುಲ್ಕಿ ನಗರವಾಸಿಗಳ ಟೋಲ್ ಪಾವತಿ ಸಮಸ್ಯೆ, ಜನಪ್ರತಿನಿಧಿಗಳ ಬ್ಯಾನರ್ ಅಳವಡಿಕೆ, ಕೆಎಸ್ ರಾವ್ ಉದ್ಯಾನವನ ಅವ್ಯವಸ್ಥೆ ಇತ್ಯಾದಿ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.
Kshetra Samachara
01/10/2021 09:45 am