ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ, ಉಳೆಪಾಡಿ, ಐಕಳ ಗ್ರಾಮಗಳ 2021 22 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ರಾಜೀವ ಗಾಂಧಿ ಸೇವಾಕೇಂದ್ರದ ಸಭಾಭವನದಲ್ಲಿ ನಡೆಯಿತು.
ಪ್ರಥಮವಾಗಿ ಗ್ರಾಮ ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ನಾಗರತ್ನ ವಿವಿಧ ಅನುದಾನಗಳ ಹಾಗೂ ಗ್ರಾಮ ಪಂಚಾಯತ್ ಆದಾಯದ ಜಮೆ ಹಾಗು ಖರ್ಚಿನ ವಿವರ ಮಂಡಿಸುತ್ತಿರುವಾಗ ಗ್ರಾಮಸ್ಥ ಏಳಿಂಜೆ ಕಂಗುರಿ ನಿವಾಸಿ ರಾಮಚಂದ್ರ ಎಂಬವರು ಆಕ್ರೋಶದಿಂದ "ಪಂಚಾಯತಿ ವ್ಯಾಪ್ತಿಯಲ್ಲಿ ದಲಿತರನ್ನು ಕಡೆಗಣಿಸಲಾಗುತ್ತಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ, ಎಲ್ಲಾ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಪಂಚಾಯತ್ ನಲ್ಲಿ ಗೋಲ್ಮಾಲ್ ಆಗಿದೆ ಎಂದು ಹೇಳಿದಾಗ ಸಭೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಹಾಗೂ ಮಾಜೀ ಅಧ್ಯಕ್ಷ ದಿವಾಕರ ಶೆಟ್ಟಿ ಮತ್ತಿತರರು ಹೇಳಿಕೆಯ ಬಗ್ಗೆ ಸಾಕ್ಷಿ ಸಮೇತ ಪುರಾವೆ ಒದಗಿಸಲು ರಾಮಚಂದ್ರ ರವರ ಬಳಿ ಕೇಳಿದಾಗ ಮಾತಿಗೆ ಮಾತು ಬೆಳೆದು ಸಭೆ ಒಂದು ಹಂತದಲ್ಲಿ ಅಲ್ಲೋಲಕಲ್ಲೋಲವಾಯಿತು.
ಈ ಸಂದರ್ಭ ನೋಡಲ್ ಅಧಿಕಾರಿ ವಿನಯಕುಮಾರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಸಫಲವಾಗದೆ ತ್ರಿಶಂಕು ಸ್ಥಿತಿ ನಿರ್ಮಾಣವಾಯಿತು
ಸಭೆಯಲ್ಲಿ ಪಂಚಾಯತ್ ಮಾಜೀ ಅಧ್ಯಕ್ಷ ದಿವಾಕರ ಶೆಟ್ಟಿ ಮತ್ತು ಕೆಲ ಗ್ರಾಮಸ್ಥರು "ಗೋಲ್ಮಾಲ್ "ಪದ ಬಳಸಿದ್ದಕ್ಕೆ ಸಾಕ್ಷ್ಯಾಧಾರ ಕೊಡಬೇಕು ಇಲ್ಲವೇ ಸಭೆಯಲ್ಲಿ ರಾಮಚಂದ್ರ ಕ್ಷಮೆಯಾಚನೆ ಮಾಡಿದರೆ ಮಾತ್ರ ಸಭೆ ಮುಂದುವರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಗ್ರಾಮಸ್ಥ ರಾಮಚಂದ್ರ ಕ್ಷಮೆಯಾಚನೆ ಮಾಡಲು ನಿರಾಕರಿಸಿದ್ದರಿಂದ ಸಭೆ ಮತ್ತೆ ಗೊಂದಲಕ್ಕೀಡಾಗಿ ಗ್ರಾಮಸ್ಥರೇ ಸಭೆಯನ್ನು ಬಹಿಷ್ಕರಿಸಿ ನಿರ್ಧರಿಸಿದರು. ಆಗ ನೋಡಲ್ ಅಧಿಕಾರಿ ಮಧ್ಯಪ್ರವೇಶಿಸಿ ಸಭೆಯನ್ನು ಮುಂದುವರಿಸಲು ಸೂಚನೆ ನೀಡಿದರು
ಬಳಿಕ ಸಭೆ ನಡೆದು ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪಂಚಾಯತ್ ವ್ಯಾಪ್ತಿಯ ಕಮ್ಮಾಜೆ ನೀರಿನ ಟ್ಯಾಂಕ್ ಬಳಿ ಭಾರಿ ಗಾತ್ರದ ಮರ ಬೆಳೆದು ಅಪಾಯದಲ್ಲಿದೆ,
ಏಳಿಂಜೆ ಭಂಡಸಾಲೆ ಶೇಖರ ಪೂಜಾರಿ ಎಂಬವರ ಮನೆಗೆ ಕಳೆದ 40 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಎಂದು ಮಹಿಳೆ ಅಳುತ್ತಾ ದೂರಿದರು.,
ಐಕಳ ಹಳೆ ಶಾಲೆಯ ಕಟ್ಟಡ ಕುಸಿಯುವ ಭೀತಿಯಲ್ಲಿದೆ ಈ ಬಗ್ಗೆ ಅನೇಕ ಬಾರಿ ಶಿಕ್ಷಣ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಉಮೇಶ್ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.
ಉಳೆಪಾಡಿ ಸರಕಾರಿ ಶಾಲೆಯಲ್ಲಿ ಇಬ್ಬರು ಶಿಕ್ಷಕರ ಅಗತ್ಯವಿದ್ದು ಈ ಬಗ್ಗೆ ಶಾಸಕರಿಗೂ ಮನವಿ ಸಲ್ಲಿಸಿದ್ದು ಮಂಗಳೂರು ಶಿಕ್ಷಣಾಧಿಕಾರಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರ ಪರವಾಗಿ ಸ್ವರಾಜ್ ಶೆಟ್ಟಿ, ದುರ್ಗಾಪ್ರಸಾದ್ ಹೆಗ್ಡೆ, ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು
ಕೋವಿಡ್ ಸಂಕಷ್ಟದ ಸಮಯದಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಜನಪರ ಕೆಲಸಗಳನ್ನು ಮಾಡಿದ ಕಟೀಲು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್ ಹಾಗೂ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಸುಗುಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
21/09/2021 05:09 pm