ಬ್ರಹ್ಮಾವರ: ಕೇಂದ್ರ ಸರಕಾರದ ಕೃಷಿ ಹಾಗೂ ರೈತರ ಅಭಿವೃದ್ಧಿ ಖಾತೆ ಸಹಾಯಕ ಸಚಿವೆಯಾಗಿ ಅಧಿಕಾರ ಸ್ವೀಕರಿಸಿ ಇಂದು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿ ಭೇಟಿ ನೀಡಿದ ಶೋಭಾ ಕರಂದ್ಲಾಜೆಯವರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಗಡಿ ಭಾಗವಾದ ಮಾಬುಕಳದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.
ಬ್ರಹ್ಮಾವರ ಮೂಲಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಬುಕಳಕ್ಕೆ ಆಗಮಿಸುತ್ತಿದ್ದಂತೆ ಮಹಿಳಾ ಮೋರ್ಚಾ ಪ್ರಮುಖರು ಆರತಿ ಬೆಳಗಿ, ಹೂ ಹಾರ ಹಾಕಿ ಬರಮಾಡಿಕೊಂಡರು ಹಾಗೂ ಜೈಕಾರ ಕೂಗಿದರು. ಅನಂತರ ಬೃಹತ್ ಕಾರು ಮೆರವಣಿಗೆ ಮೂಲಕ ಕುಂದಾಪುರದ ಕಡೆಗೆ ಕರೆದೊಯ್ಯಲಾಯಿತು. ತೆಕ್ಕಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರು ಶುಭಾಶಯ ಕೋರಿ ಮುಖ್ಯ ವೃತ್ತದಲ್ಲಿ ಹೈಮೋಸ್ಟ್ ದೀಪ ಅಳವಡಿಸುವಂತೆ ಮನವಿ ಸಲ್ಲಿಸಿದರು. ಅನಂತರ ಕುಂದಾಪುರಕ್ಕೆ ತೆರಳಿದ ಸಚಿವರು ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಆಕ್ಸಿಜನ್ ಘಟಕಕ್ಕೆ ಚಾಲನೆ ನೀಡಿದರು.
ಕುಂದಾಪುರ ಮಂಡಲದ ಸಮಿತಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ ಪೈ, ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಕೋಟ ಜಿ.ಪಂ. ವ್ಯಾಪ್ತಿಯ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಯುವ ಮೋರ್ಚಾ ಅಧ್ಯಕ್ಷ ಸುಶಾಂತ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು, ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
19/08/2021 07:09 pm