ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವತಿಯಿಂದ ಕಾರ್ನಾಡ್ ಗಾಂಧಿ ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸರಳವಾಗಿ ಆಚರಿಸಲಾಯಿತು.
ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಧ್ವಜಾರೋಹಣಗೈದು, ಮುಲ್ಕಿ ಠಾಣಾ ಎಸ್ಸೈ ವಿನಾಯಕ ತೋರಗಲ್ ನೇತೃತ್ವದಲ್ಲಿ ಪೊಲೀಸ್ ರೈಫಲ್ಸ್ ಮತ್ತು ಗೃಹರಕ್ಷಕದಳದ ಪಥಸಂಚಲನದಲ್ಲಿ ಧ್ವಜವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು ಪ್ರಾಮಾಣಿಕತೆ ಮತ್ತು ಸಚ್ಚಾರಿತ್ರ್ಯದಿಂದ ಕೆಲಸ ಮಾಡಿದರೆ ಮಾತ್ರ ಜನಾಶೀರ್ವಾದ ಸಾಧ್ಯ ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಸುಮಾರು 9000 ಹಕ್ಕುಪತ್ರ ವಿತರಣೆ ಯಾಗಿದ್ದು ಮುಲ್ಕಿ ನಗರ ಪಂಚಾಯಿತಿಗೆ ಸ್ವಚ್ಛ ಸರ್ವೇಕ್ಷಣೆ ಹಾಗೂ ಬಯಲು ಮುಕ್ತ ಶೌಚಾಲಯ ಪ್ರಶಸ್ತಿ ದೊರೆತಿದೆ ಎಂದರು.
ಈ ಸಂದರ್ಭ ಶಾಸಕರು ಮುಲ್ಕಿ ತಾಲೂಕು ವ್ಯಾಪ್ತಿಯ ಕಾರ್ನಾಡ್, ಕೆಮ್ರಾಲ್, ಅತ್ತೂರು, ಕೊಯಿಕುಡೆ ವ್ಯಾಪ್ತಿಯ 22 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು ಹಾಗೂ ಗೃಹರಕ್ಷಕದಳದ 2015 16 ನೇ ಸಾಲಿನ ವಿಶಿಷ್ಟ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ಸ್ವೀಕರಿಸಿದ ಮಾಜಿ ಘಟಕಾಧಿಕಾರಿ ಮನ್ಸೂರ್ ಎಚ್. ರವರನ್ನು ಶಾಸಕರು ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು.
ಮುಲ್ಕಿ ತಹಶಿಲ್ದಾರ್ ಕಮಲಮ್ಮ, ಠಾಣಾಧಿಕಾರಿ ಕುಸುಮಾಧರ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣ, ಮುಲ್ಕಿ ನಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ್ ಶೆಟ್ಟಿ, ಯೋಗೀಶ್ ಕೋಟ್ಯಾನ್,ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಮಾಜೀ ಮುಖ್ಯಾಧಿಕಾರಿ ಡಾ. ಹರಿಶ್ಚಂದ್ರ ಸಾಲಿಯಾನ್, ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಧನ್ಯವಾದ ಅರ್ಪಿಸಿದರು.
ನ್ಯಾಯವಾದಿ ಭಾಸ್ಕರ ಹೆಗ್ದೆ ಕಾರ್ಯಕ್ರಮ ನಿರೂಪಿಸಿದರು.
Kshetra Samachara
15/08/2021 12:21 pm