ಹೆಬ್ರಿ : ಮುದ್ರಾಡಿ ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ೧೫ನೇ ಹಣಕಾಸು ಯೋಜನೆಯಲ್ಲಿ ಹಿಂದಿನ ಪಂಚಾಯಿತಿಯ ಆಡಳಿತ ಅವಧಿಯ ಕ್ರೀಯಾ ಯೋಜನೆಗಳು ಅನುಷ್ಠಾನ ಆಗದಂತೆ ತಡೆದು ಬಳಿಕ ಆಡಳಿತಾಧಿಕಾರಿ ನೇಮಕಗೊಂಡ ಬಳಿಕ ಏಕ ಪಕ್ಷೀಯ ತೀರ್ಮಾನ ಮಾಡಿ ೧೫ ಲಕ್ಷ ಮೊತ್ತದ ಯೋಜನೆಯನ್ನು ಆಡಳಿತಾಧಿಕಾರಿಗೆ ತಪ್ಪು ಮಾಹಿತಿ ನೀಡಿ ಬದಲಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೆಬ್ರಿ ಬ್ಲಾಕ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ದೂರಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುದ್ರಾಡಿ ಗ್ರಾಮ ಪಂಚಾಯಿತಿಯ ರಾಜೀವ ಗಾಂಧಿ ಭಾರತ ನಿರ್ಮಾಣ ಸಭಾಭವನವನ್ನು ಐಷಾರಾಮಿ ಕಚೇರಿಯನ್ನಾಗಿ ಪಿಡಿಒ ಪರಿವರ್ತಿಸಿದ್ದಾರೆ. ಹೆಬ್ರಿ ತಾಲ್ಲೂಕು ಪಂಚಾಯಿತಿ ಕಚೇರಿಯ ಕಾಮಗಾರಿಯನ್ನು ಯಾವೂದೇ ಟೆಂಡರ್ ಕರೆಯದೆ ಮಾಡಲಾಗಿದೆ, ವರಂಗ ಮುದ್ರಾಡಿ ಮತ್ತು ಹೆಬ್ರಿ ಗ್ರಾಮ ಪಂಚಾಯಿತಿ ಸೇವೆ ಸಲ್ಲಿಸುತ್ತಿದ್ದ ಪಿಡಿಒ ಅವ್ಯವಹಾರ ನಡೆಸಿದ್ದಾರೆ. ಪಂಚಾಯಿತಿ ರಾಜ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಲಂ ೨೮೬ರ ಪ್ರಕಾರ ಲೋಕ ನೌಕರ ಎಂಬ ಪದದ ಅರ್ಥವೇ ಗೊತ್ತಿಲ್ಲದಂತೆ ಸರ್ವಾಧಿಕಾರಿಯಂತೆ ಪಿಡಿಒ ವರ್ತಿಸುತ್ತಿದ್ದಾರೆ. ಯಾವೂದೇ ಮಾನದಂಡ ಇಟ್ಟುಕೊಳ್ಳದೆ ಹೆಬ್ರಿಯಲ್ಲಿ ಅತೀ ಹೆಚ್ಚು ತೆರಿಗೆ ಏರಿಸಿದ್ದಾರೆ. ಇವರ ಬಗ್ಗೆ ಸೂಕ್ತ ತನಿಖೆ ನಡೆಸಿ ಸೇವೆಯಿಂದ ಅಮಾನತು ಮಾಡಬೇಕು ಮತ್ತು ಹೆಬ್ರಿ ಹಾಗೂ ಮುದ್ರಾಡಿ ಗ್ರಾಮ ಪಂಚಾಯಿತಿಗೆ ಹೊಸ ಪಿಡಿಒ ನೇಮಕ ಮಾಡುವಂತೆ ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ. ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯವರ ಮೂಲಕ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯವರಿಗೆ ದೂರು ನೀಡಲಾಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಮುಖಂಡ ಸೀತಾನದಿ ರಮೇಶ ಹೆಗ್ಡೆ, ಪಕ್ಷದ ವಿವಿಧ ಪ್ರಮುಖರು ಭಾಗವಹಿಸಿದ್ದರು.
Kshetra Samachara
05/08/2021 07:15 pm