ಮಂಗಳೂರು: ಬಿಲ್ಲವ ಸಮುದಾಯ, ಕೋಟಿ-ಚೆನ್ನಯರು ಹಾಗೂ ಜನಾರ್ದನ ಪೂಜಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕೆಂದು ಪ್ರತಿಭಟನೆ ನಡೆಸಿದ ದ.ಕ. ಜಿಲ್ಲಾ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಇಂದು ನಗರದ ಓಶಿಯನ್ ಪರ್ಲ್ ಹೊಟೇಲ್ ಸಮೀಪ ನಡೆಯಿತು.
ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಬಿಲ್ಲವ ಸಮುದಾಯ ಹಾಗೂ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗಿತ್ತು.
ಆದ್ದರಿಂದ ಇಂತಹ ಹೇಳಿಕೆ ನೀಡಿರುವ ಜಗದೀಶ್ ಅಧಿಕಾರಿಯನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಜೆಡಿಎಸ್ ಕಾರ್ಯಕರ್ತರು ನಗರದ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ಆಯೋಜಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ಬಿಜೆಪಿ ಕಚೇರಿ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಉದ್ದೇಶಿಸಿದಂತೆ ಸುಮಾರು 25-30 ರಷ್ಟು ಜೆಡಿಎಸ್ ಕಾರ್ಯಕರ್ತರು ಪಿವಿಎಸ್ ಕಲಾಕುಂಜ ರಸ್ತೆಯಿಂದ ಜಗದೀಶ್ ಅಧಿಕಾರಿ ವಿರುದ್ಧ ಘೋಷಣೆ ಕೂಗುತ್ತಾ ಬಿಜೆಪಿ ಕಚೇರಿಗೆ ಪ್ರತಿಭಟನೆ ನಡೆಸಲು ಧಾವಿಸಿದ್ದರು.
ಈ ಸಂದರ್ಭ ಪ್ರತಿಭಟನಾಕಾರರು ಕಲಾಕುಂಜ ರಸ್ತೆಯಿಂದ ಓಶಿಯನ್ ಪರ್ಲ್ ಹೊಟೇಲ್ ಮುಂಭಾಗ ಬಂದು ಘೋಷಣೆ ಕೂಗಿ ಅಳವಡಿಸಿರುವ ಬ್ಯಾರಿಕೇಡ್ ನತ್ತ ನುಗ್ಗುತ್ತಿದ್ದಂತೆಯೇ ಪೊಲೀಸರು ಎಲ್ಲರನ್ನೂ ವಶಕ್ಕೆ ತೆಗೆದುಕೊಂಡರು.
Kshetra Samachara
12/02/2021 07:15 pm