ವರದಿ: ರಹೀಂ ಉಜಿರೆ
ಉಡುಪಿ: ಹಿಜಾಬ್ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಂಡು, ಕರಾವಳಿಯಲ್ಲಿ ಧರ್ಮಗಳ ಮಧ್ಯೆ ಕಲಹಕ್ಕೆ ಕಾರಣವಾಗಿದ್ದು ಗೊತ್ತೇ ಇದೆ. ಈ ಮಧ್ಯೆ ಇಂದು ಉಡುಪಿ ನಗರಸಭೆ ನಡೆಸಿದ ಹೋಟೆಲ್ ತೆರವು, ಹಿಜಾಬ್‌ಗೆ ಪ್ರತಿಕಾರ ಎನ್ನುವ ಆರೋಪ ಕೇಳಿ ಬಂದಿದೆ! ಹಿಜಾಬ್ ವಿವಾದದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ನಿಂತದ್ದಕ್ಕೇ ಹೋಟೆಲ್ ಕೆಡವಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅವರಿಗೆ ಸೇರಿದ ಝುರಾ ಹೆಸರಿನ ಹೋಟೆಲ್ ಕಾರ್ಯನಿರ್ವಹಿಸುತ್ತಿತ್ತು. ಉಡುಪಿಯಲ್ಲೇ ಫೇಮಸ್ ನಾನ್ ವೆಜ್ ಹೋಟೆಲ್ ಇದಾಗಿದ್ದು, ದಿನ ನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ ಆಗೋ ಈ ಹೋಟೆಲ್ ಅನ್ನು ಇಂದು ಉಡುಪಿ ನಗರ ಸಭೆಯವರು ಅನಧಿಕೃತ ಎಂದು ತೆರವುಗೊಳಿಸಿದ್ದಾರೆ.
ಆದರೆ ಹೋಟೆಲ್ ಮಾಲಕ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಹೇಳೋ ಪ್ರಕಾರ, ಇದು ಹಿಜಾಬ್ ಪರ ನಿಂತದ್ದಕ್ಕೆ ಪ್ರತಿಕಾರವಂತೆ! ಇದು ಅಕ್ರಮ ಕಟ್ಟಡ ಅಲ್ಲ ,ಮಸೀದಿಯ ಕಟ್ಟಡ, ನಗರಸಭೆ ತೆರವಿಗೆ ನೋಟಿಸ್ ನೀಡಿದ ಬಳಿಕ ಕೋರ್ಟ್ ಗೆ ಹೋಗಿದ್ದೆವು. ಅಲ್ಲಿ ನಮ್ಮ ಅರ್ಜಿ ರಿಜೆಕ್ಟ್ ಆಗಿ ಎಂಟು ತಿಂಗಳು ಆಗಿವೆ. ಇಷ್ಟರವರೆಗೂ ತೆರವುಗೊಳಿಸದೇ ಇರುವವರು ಈಗ ಏಕಾಏಕಿ ತೆರವುಗೊಳಿಸಿದ್ದು ರಾಜಕೀಯ ಪ್ರೇರಿತ. ಅಲ್ಲದೇ ಉಡುಪಿಯಲ್ಲಿ ಹಲವಾರು ಅಕ್ರಮ ಕಟ್ಟಡ ಇದ್ದು ನಮ್ಮ
ಹೋಟೆಲ್ ಅನ್ನು ಮಾತ್ರ ಏಕೆ ತೆರವುಗೊಳಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಹದಿನೆಂಟು ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿವೆ.ಆದರೆ ಯಾವುದನ್ನೂ ತೆರವುಗೊಳಿಸದೆ ಕೇವಲ ನಮ್ಮ ಹೊಟೇಲನ್ನು ಮಾತ್ರ ತೆರವು ಮಾಡಲಾಗಿದೆ.ಯಾಕೆಂದರೆ ಉಳಿದ ಅಕ್ರಮ ಕಟ್ಟಡಗಳು ಹಿಂದೂಗಳಿಗೆ ಸೇರಿದ್ದಾಗಿದೆ.ಹಿಜಾಬ್ ಪ್ರಕರಣದ ನಂತರ ಬಿಜೆಪಿ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಎಸ್ ಡಿಪಿಐ ಮುಖಂಡ ,ನಝೀರ್ ಸಹೋದರ ಬಶೀರ್ ಆರೋಪಿಸಿದ್ದಾರೆ
ಒಟ್ಟಿನಲ್ಲಿ, ಹಿಜಾಬ್ ವಿವಾದ ಉಡುಪಿಯನ್ನು ಸದ್ಯಕ್ಕೆ ಬಿಡುವಂತೆ ಕಾಣುತ್ತಿಲ್ಲ. ಹಿಜಾಬ್ ವಿವಾದಕ್ಕೂ ಇದಕ್ಕೂ ಸಂಬಂಧ ಇಲ್ಲ ಎನ್ನುವ ಅಧಿಕಾರಿಗಳು ಇತರ ಅನಧಿಕೃತ ಕಟ್ಟಡಗಳನ್ನು ಕೆಡವುದು ಯಾವಾಗ ಎನ್ನುವ ಪ್ರಶ್ನೆಯೂ ಎದ್ದಿದೆ.
PublicNext
26/03/2022 09:53 pm