ಮಂಗಳೂರು: ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯು ಸಿಡಿಸಿ ಅಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಿತು.
ಆ ಬಳಿಕ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಸಿಡಿಸಿ ಸಭೆಯಲ್ಲಿ ಕಾಲೇಜಿನಲ್ಲಿ ನಡೆದಿರುವ ಘಟನೆಗಳ ಬಗ್ಗೆ ಚರ್ಚಿಸಲಾಗಿದೆ. ಇನ್ನು ಮುಂದೆ ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜು ಕ್ಯಾಂಪಸ್ ಗೆ ಹಿಜಾಬ್ ಧರಿಸಿಕೊಂಡು ಬರಬಹುದು. ಆದರೆ ತರಗತಿ, ಗ್ರಂಥಾಲಯ ಸೇರಿದಂತೆ ಎಲ್ಲಿಯೂ ಹಿಜಾಬ್ ಗೆ ಅವಕಾಶವಿಲ್ಲ. ಅದನ್ನು ಪ್ರತ್ಯೇಕ ಕೊಠಡಿಯಲ್ಲಿ ಕಳಚಿಟ್ಟು ತರಗತಿಗೆ ಬರಬೇಕು. ಈ ಆದೇಶ ಕಟ್ಟುನಿಟ್ಟಿನಲ್ಲಿ ಪಾಲನೆಯಾಗುತ್ತದೆ. ಹಿಜಾಬ್ ಗೆ ಸಪೋರ್ಟ್ ಮಾಡಿರುವ ಪ್ರಾಧ್ಯಾಪಕರ ವಿರುದ್ಧ ದೂರಿಗೆ ಸಾಕ್ಷ್ಯ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಿಜಾಬ್ ಬೇಕೆಂದು ಹೇಳುವ ವಿದ್ಯಾರ್ಥಿನಿಯರು ಬಂದ ಮೇಲೆ ಅವರಿಗೆ ತಿಳುವಳಿಕೆ ಹೇಳಿದ್ದೇನೆ. ಆದರೆ ಅವರು ಡಿಸಿ ಬಳಿ ಹೋಗುತ್ತೇವೆ ಎಂದಾಗ ಹೋಗಿ ಅಂದಿದ್ದೇನೆ. ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡ್ತೇವೆ. ಬೇರೆ ಕಾಲೇಜು ಹೋಗೋದಾದ್ರೆ ವ್ಯವಸ್ಥೆ ಮಾಡುತ್ತೇವೆ. ನಮಗೆ ಬಂದಿರುವ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅಪ್ಲೈ ಆಗುತ್ತದೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸೋಮವಾರದಿಂದ ನೂರಕ್ಕೆ ನೂರು ಕೋರ್ಟ್ ಆದೇಶ ಪಾಲಿಸಬೇಕು. ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ ತೆಗೆದು ತರಗತಿಗೆ ಹೋಗಬಹುದು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡುವ ಕೆಲಸವನ್ನು ಕುಲಪತಿ ಮಾಡುತ್ತಾರೆ. ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪ್ರತಿಭಟನೆ ಮಾಡಲಾಗಿದೆ. ಪದವಿ ಕಾಲೇಜುಗಳಿಗೆ ಕೋರ್ಟ್ ಆದೇಶ ಅನ್ವಯ ಆಗಬೇಕೆಂಬ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುನಿವರ್ಸಿಟಿ ಪಾರ್ಟಿ ಮಾಡಲಾಗಿದೆ. ಹೀಗಿರುವಾಗ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೆ ಅನ್ವಯ ಆಗುತ್ತದೆ ಎಂದು ಹೇಳಿದರು.
Kshetra Samachara
27/05/2022 10:30 pm