ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ಯೋಜನೆಗಳಿಂದ ಮಂಜೂರಾದ ಪರಿಹಾರಧನ ಚೆಕ್ ಗಳ ವಿತರಣೆ ವಿಟ್ಲದ ಅತಿಥಿಗೃಹದಲ್ಲಿ ನಡೆಯಿತು.
ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಮಾಜದ ದುರ್ಬಲ ವರ್ಗದವರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂಬ ದೃಷ್ಟಿಯಿಂದ ಚೆಕ್ ವಿತರಣೆ ಮಾಡಲಾಗುತ್ತಿದೆ. ಪಟ್ಟಣ ಪಂಚಾಯತ್ ಗಳಿಗೆ 5 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಕೃತಿಯಲ್ಲಿ ಪರಿವರ್ತನೆಯಾದಾಗ ನಮ್ಮಲ್ಲಿಯೂ ಬದಲಾವಣೆ ಆಗಬೇಕು ಎಂದರು.
ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮನೆ ರಿಪೇರಿ, ನಿರ್ಮಾಣಕ್ಕೆ ಧನಸಹಾಯ ಚೆಕ್, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿಶೇಷಚೇತನರು ಸಹಿತ ಒಟ್ಟು 23 ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಕಂದಾಯ ಇಲಾಖೆ ವತಿಯಿಂದ ನೆರೆ ಪರಿಹಾರ ಯೋಜನೆಯಲ್ಲಿ ಬಿಡುಗಡೆಯಾದ 5 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.
ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರುಣ್ ಎಂ. ವಿಟ್ಲ,
ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಮಂಜುನಾಥ ಕೆ.ಎಚ್., ಗ್ರಾಮ ಕರಣಿಕ ಪ್ರಕಾಶ್ ಪಿ., ಪಟ್ಟಣ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
13/01/2022 06:04 pm