ಬಜಪೆ :ಎಸ್ಇಝಡ್ ಕಂಪೆನಿಗಳಿಗೆ ಒಳಪಟ್ಟ ಕಂಪೆನಿಗಳಿಂದ ನಿರಂತರ ಆಗುತ್ತಿರುವ ಪರಿಸರ ಮಾಲಿನ್ಯ ,ದುರ್ವಾಸನೆ ಹಾಗೂ ಹಲವು ಸಮಸ್ಯೆಗಳ ಸಮಾಲೋಚನೆಗಾಗಿ ಕರೆಯಲಾಗಿದ್ದ ಪೆರ್ಮುದೆ ವಿಶೇಷ ಗ್ರಾಮಸಭೆಗೆ ಕಂಪೆನಿ ಅಧಿಕಾರಿಗಳು ಗೈರು ಆಗಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ.
ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಎಲ್ಲರಿಗೂ ಆದೇಶ ಹೊರಡಿಸಿ ಜಿಲ್ಲಾಧಿಕಾರಿ ಕಛೇರಿಯಲ್ಲೇ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮುಖಾಮುಖಿ ಸಭೆಯಲ್ಲಿ ತುರ್ತಾಗಿ ನಡೆಸುವ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲು ಪೆರ್ಮುದೆ ಗ್ರಾಮ ಪಂಚಾಯತ್ ನ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು. ಸೆ.27ರಂದು ಪೆರ್ಮುದೆ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಕಂಪೆನಿಗಳಿಂದ ರಾಸಾಯನಿಕ ಮಿಶ್ರಿತ ದ್ರವ ತ್ಯಾಜ್ಯ ತೋಡುಗಳಲ್ಲಿ ಹರಿಬಿಡುವ ಮೂಲಕ ಅಪಾಯಕಾರಿ, ಸನ್ನಿವೇಶ ಸೃಷ್ಟಿಸಿದ್ದಲ್ಲದೆ ಜಲಮಾಲಿನ್ಯದ ಜತೆಗೆ ತೀವ್ರವಾದ ದುರ್ವಾಸನೆಯ ಗಾಳಿ, ಹೊಗೆ ಜನಜೀವನಕ್ಕೆ ಸವಾಲಾಗಿರುವ ಹಾಗೂ ಸ್ಥಳೀಯ ಪಂಚಾಯಿತಿಗೆ ತೆರಿಗೆ ಅಥವಾ ರಾಜಧನ ಕಂಪೆನಿಗಳಿಂದ ಸಲ್ಲಿಕೆಯಾಗದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ವಿಶೇಷ ಗ್ರಾಮಸಭೆ ನಡೆಸುವ ಬಗ್ಗೆ ನಿರ್ಣಯ ಕೈಗೊಂಡಿದ್ದರು.ಅದರೆ ವಿಶೇಷ ಗ್ರಾಮ ಸಭೆಯಲ್ಲಿ ಮಾತ್ರ ಕಂಪೆನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದರು.
ಈ ಬಗ್ಗೆ ಪ್ರತಿಕ್ರಯಿಸಿದ ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಅಂಚನ್ ಅವರು ಗ್ರಾಮಸಭೆಯ ನಿರ್ಣಯದಂತೆ ಎಂಆರ್‍ಪಿಎಲ್ ಕೆಐಎಡಿಬಿ ಹಾಗೂ ಎಂಎಸ್‍ಇಝಡ್ ವ್ಯಾಪ್ತಿಯ ಕಂಪೆನಿಗಳ ಪ್ರಮುಖರಿಗೆ ಮಾತ್ರವಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೂ ಖುದ್ದಾಗಿ ತೆರಳಿ ಆದ್ಯತೆಯ ಆಹ್ವಾನ ನೀಡಿದ್ದಲ್ಲದೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಅವರ ಬೇಡಿಕೆಗಳು ಈಡೇರಿಸಲು ಒಪ್ಪದಿದ್ದಲಿ ಎಂಎಸ್‍ಇಝಡ್ ಮುಂದೆ ತೀವ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಿದ್ದರೂ ಇಷ್ಟೊಂದು ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಗ್ರಾಮಸ್ಥರನ್ನೊಳಗೊಂಡು ಅಧಿಕಾರಿಗಳ ಮುಖಾಮುಖಿ ಸಭೆಗೆ ಒತ್ತಾಯಿಸುವುದಾಗಿ ಸಭೆಗೆ ತಿಳಿಸಿದರು.
ಸಂತ್ರಸ್ಥರಲ್ಲಿ ಓರ್ವರಾದ ಗ್ರೆಗರಿ ಪತ್ರಾವೋ ಅವರು ಮಾತನಾಡಿ 2006ರಿಂದ ಭೂಸ್ವಾಧೀನಗೊಂಡಾಗ 135 ಮಂದಿ ಕುಟುಂಬಗಳು ಸಂತ್ರಸ್ಥರಾಗಿದ್ದಾರೆ. ಇದುವರೆಗೂ ಕುಟುಂಬದ ಸದಸ್ಯರಿಗೆ ಉದ್ಯೋಗದ ಪ್ಯಾಕೇಜ್ ನೀಡದೆ 15 ವರ್ಷಗಳಿಂದ ವಂಚಿಸುತ್ತಿದ್ದಾರೆ.ದ.ಕ. ಜಿಲ್ಲಾಧಿಕಾರಿಗಳು ಇತ್ತೀಚೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಎಲ್ಲಾ 135 ಮಂದಿಗೆ ಎಂಆರ್‍ಪಿಎಲ್‍ನಲ್ಲಿಯೇ ಉದ್ಯೋಗ ನೀಡಬೇಕೆಂದು ಆದೇಶಿಸುವಂತೆ ಒತ್ತಾಯಿಸಿದ್ದ ನಮ್ಮ ಕೃಷಿ ಭೂಮಿಯ ಭೂಸ್ವಾಧೀನ ನಡೆಸಲು ಅವಸರಿಸಿದವರು ಉದ್ಯೋಗ ನೀಡಲು ಯಾಕೆ ತಡವರಿಸಿದ್ದಾರೆ ಎಂದು ಆಕ್ರೋಶಗೊಂಡರು.
ಪೆರ್ಮುದೆ ಗ್ರಾ.ಪಂ. ಅದ್ಯಕ್ಷ ಪ್ರಸಾದ್ ಅಂಚನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಎಂಎಸ್‍ಇಝಡ್ ಅಧಿಕಾರಿ ಯೋಗೀಶ್, ಎಂಎಸ್‍ಇಝಡ್‍ನ ಮುಖ್ಯ ಮಾಲಿನ್ಯ ನಿಯಂತ್ರಣ ಅಧಿಕಾರಿ ವಿನಯ್ ಕುಮಾರ್, ಕೆಐಎಡಿಬಿಯ ಅಧಿಕಾರಿ ಬಿ.ಆರ್. ಕಾಳಗಿ ಹಾಗೂ ಮಹೇಶ್, ಗ್ರಾ.ಪಂ. ಉಪಾಧ್ಯಕ್ಷೆ ಲೀನಾ ಡಿಸೋಜ, ಪಿಡಿಒ ಶೈಲಜಾ,ಪಂ.ಸದಸ್ಯರುಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
06/10/2021 08:15 pm