ಬೈಂದೂರು: ನಿರಂತರ ತಾರತಮ್ಯಕ್ಕೊಳಗಾಗಿರುವ ಕಾಲ್ತೋಡು ಗ್ರಾಮದ 1ನೇ ವಾರ್ಡ್ ನಲ್ಲಿ ಮೂಲ ಸೌಲಭ್ಯಗಳದ್ದೇ ಕೊರತೆ. ಅನುದಾನವೇ ಇಲ್ಲ! ಇದ್ದ ಅನುದಾನಗಳೂ ಅನುಷ್ಠಾನಕ್ಕೆ ಬಂದಾಗ ಸಂಪೂರ್ಣ ಕಳಪೆಯಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಪರಿಣಾಮವಾಗಿ ಇಲ್ಲಿನ ಸ್ಥಳೀಯ ಯುವಕರೇ ಹಾರೆ, ಪಿಕ್ಕಾಸು ಹಿಡಿದು ಶ್ರಮದಾನ ಮಾಡಿದ್ದಾರೆ.
ಈ 1ನೇ ವಾರ್ಡ್ ನಲ್ಲಿರುವ ಹತ್ತಿಹೊಳೆ ಮತ್ತು ಕಲ್ಮಠ ಆಲೂರಿಗೆ ಸಂಪರ್ಕಿಸುವ ರಸ್ತೆ ಹೊಂಡಾಗುಂಡಿಗಳಿಂದ ಕೂಡಿದ್ದು, ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಪಂಚಾಯಿತಿ ಕ್ರಿಯಾ ಯೋಜನೆಯಲ್ಲಿ ರಸ್ತೆಗುಂಡಿ ಮುಚ್ಚಲು ಹಣ ಮೀಸಲಿಟ್ಟರೂ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಅನುದಾನದ ಹಣವನ್ನು ವಿತ್ ಡ್ರಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜನರು ಪ್ರಶ್ನಿಸಿದರೆ ಮೀಸಲಿಟ್ಟ ಹಣ ಸಾಕಾಗಲಿಲ್ಲ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ಆದ್ದರಿಂದ ಈ ಭಾಗದಲ್ಲಿ ರಸ್ತೆ ಇನ್ನಿತರ ಮೂಲ ಸೌಲಭ್ಯ ನೀಡದೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಬೇಸತ್ತ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸ್ವಯಂಪ್ರೇರಿತವಾಗಿ ತಾವೇ ರಸ್ತೆಯ ಗುಂಡಿಗಳನ್ನೆಲ್ಲ ಮುಚ್ಚಿದ್ದಾರೆ. ರಮೇಶ್ ಅತ್ತಿಹೊಳೆ, ಉದಯ್ ಅತ್ತಿಹೊಳೆ, ಸತೀಶ್ ಕಲ್ಮಠ, ಕವಿನ್ ಹೊಸಂಗಡಿ ಹಾಗೂ ಸಾರ್ವಜನಿಕರು ಶ್ರಮದಾನದಲ್ಲಿ ಭಾಗವಹಿಸಿದರು.
- ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
Kshetra Samachara
19/09/2022 07:03 pm