ಮಂಗಳೂರು: ಕರಾವಳಿಯಲ್ಲಿ ಒಮ್ಮೆ ಮಳೆಗಾಲ ಶುರುವಾಯಿತೆಂದರೆ ನಿರಂತರ ಮಳೆ ಸುರಿಯಲಾರಂಭಿಸುತ್ತದೆ. ಈ ವೇಳೆ ಚರಂಡಿ, ಕಾಲುವೆ, ರಸ್ತೆ ಸುವ್ಯವಸ್ಥೆಯಾಗಿದ್ದರೂ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದಷ್ಟು ಮಳೆಯ ಅಬ್ಬರವಿರುತ್ತದೆ. ಈ ನಡುವೆ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ನಿರೀಕ್ಷಿತ ವೇಗ ಪಡೆಯದೆ ಕುಂಟುತ್ತಾ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಗೆದಿಟ್ಟ ರಸ್ತೆ, ಅಸಮರ್ಪಕ ಚರಂಡಿಯಿಂದಾಗಿ ಜನಸಾಮಾನ್ಯರು ಪಾಡು ಪಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
ಮಂಗಳೂರು ನಗರ, ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಬಳಿಕ ಎಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆಗಳನ್ನು ಅಗೆದು ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಅಲ್ಲದೆ, ವೈಜ್ಞಾನಿಕ ಚರಂಡಿ ವ್ಯವಸ್ಥೆಯಾಗದ ಹಿನ್ನೆಲೆಯಲ್ಲಿ ಮಳೆನೀರು ಸರಾಗವಾಗಿ ಹರಿಯಲು ತೊಂದರೆಯಾಗಲಿದೆ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು, ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಲಿದೆ.
ಫೆಬ್ರವರಿಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ವಿಳಂಬ ಆಗುತ್ತಿರುವ ಕಾಮಗಾರಿಗಳಿಗೆ ವೇಗ ಕೊಡಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ತಾಕೀತು ಮಾಡಿದ್ದರು. ಆದರೂ ಕಾಮಗಾರಿಗಳು ವೇಗ ಪಡೆದಿಲ್ಲ.
ಇತ್ತೀಚೆಗೆ ಸಚಿವ ಸುನಿಲ್ ಕುಮಾರ್ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆ ನಡೆಸಿ ಹೆಚ್ಚಿನ ಕಾಮಗಾರಿಗಳು ಮುಂದಿನ ಡಿಸೆಂಬರ್ - ಜನವರಿಯಲ್ಲಿ ಲೋಕಾರ್ಪಣೆ ಆಗಲಿದೆ ಎಂದಿದ್ದಾರೆ. ಈ ಮೂಲಕ ಈ ಮಳೆಗಾಲದಲ್ಲಿ ಅರ್ಧಂಬರ್ಧ ರಸ್ತೆ ಕಾಮಗಾರಿಯಿಂದ ತೊಂದರೆ ತಪ್ಪಿದ್ದಲ್ಲ. ಆದರೂ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ ಕೊಡಬೇಕಾಗಿದೆ.
Kshetra Samachara
05/06/2022 03:10 pm