ವರದಿ: ರಹೀಂ ಉಜಿರೆ
ಉಡುಪಿ: ಜಿಲ್ಲೆ ರಚನೆಯಾಗಿ 25 ವರ್ಷಗಳ ಬಳಿಕ ಪೂರ್ಣ ಪ್ರಮಾಣದ ಜಿಲ್ಲಾಸ್ಪತ್ರೆ ಕಾಮಗಾರಿ ಭರದಿಂದ ಸಾಗಿದೆ. ಅಜ್ಜರಕಾಡುವಿನಲ್ಲಿ ಈಗ ಇರುವ ಜಿಲ್ಲಾಸ್ಪತ್ರೆ ಆವರಣದಲ್ಲೇ ನೂತನ ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದೆ. ಮುಂದಿನ ಮೇ ತಿಂಗಳಲ್ಲೇ ಆಸ್ಪತ್ರೆಯು ರೋಗಿಗಳ ಉಪಯೋಗಕ್ಜೆ ಸಿಗಬಹುದು ಎಂಬ ಅಂದಾಜಿದೆ.
ಹಾಗೆ ನೋಡಿದರೆ ಆರೋಗ್ಯ ಮತ್ತು ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಉಡುಪಿಯಲ್ಲಿ ಹೆಸರಿಗೆ ಮಾತ್ರ ಒಂದು ಜಿಲ್ಲಾಸ್ಪತ್ರೆ ಇತ್ತು. ಜಿಲ್ಲಾಸ್ಪತ್ರೆ ಎಂಬ ನಾಮಫಲಕ ಬಿಟ್ಟರೆ ಅಲ್ಲಿ ವಿಶೇಷ ಸೌಕರ್ಯಗಳೇ ಇಲ್ಲ. ಈ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳ ಮೇಲೆ ಜನರು ಒತ್ತಡ ಹಾಕುತ್ತಲೇ ಇದ್ದರು. ಕೊನೆಗೂ ಎಚ್ಚೆತ್ತ ಸರಕಾರ ಉಡುಪಿಗೆ ಪೂರ್ಣ ಪ್ರಮಾಣದ ಜಿಲ್ಲಾಸ್ಪತ್ರೆ ಮಂಜೂರು ಮಾಡಿತ್ತು.
ಜಿಲ್ಲೆಯ ಜನಸಾಮಾನ್ಯರು ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆಯನ್ನು ಪಡೆಯುವ ರೀತಿಯಲ್ಲಿ ಆಸ್ಪತ್ರೆ ಕಟ್ಟಡದ ನೀಲನಕ್ಷೆಯನ್ನು ತಯಾರಿಸಲಾಗಿದೆ. ತುರ್ತು ಚಿಕಿತ್ಸಾ ಘಟಕ, ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಶಾಲೆ, ಡಯಾಲಿಸಿಸ್ ಕೇಂದ್ರ, ಐಸಿಯು ಕೇಂದ್ರಗಳು ನೆಲ ಮಹಡಿಯಲ್ಲೇ ನಿರ್ಮಿಸುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿ ವಸತಿಗೃಹವನ್ನು 115 ಕೋಟಿ ವೆಚ್ಚದಲ್ಲಿ 27375 ಚ. ಮೀ. ವಿಸ್ತೀರ್ಣದಲ್ಲಿ ಕರಾವಳಿ ಭಾಗದ ಹವಾಮಾನಕ್ಕನುಗುಣವಾಗಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತದೆ. ಮುಂದಿನ ಮೇ ತಿಂಗಳ ಹೊತ್ತಿಗೆ ಸುಸಜ್ಜಿತ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Kshetra Samachara
04/05/2022 10:27 pm