ಮಂಗಳೂರು: ದೂರದೃಷ್ಟಿ ಇಲ್ಲದೆ, ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಸರಕಾರ ತೈಲ ಬೆಲೆಯನ್ನು ಇಳಿಕೆ ಮಾಡಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿ ಚುನಾವಣೆ ಇರುವಾಗ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿ ಆ ಬಳಿಕ ಮತ್ತೆ ಏರಿಕೆ ಮಾಡಲಾಯಿತು. ಇದೀಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆಯುವ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ತಪ್ಪು ಆಡಳಿತದಿಂದಾಗಿ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರೇಷನಿಂಗ್ ಮೇಲೆ ಪೆಟ್ರೋಲ್ ಕೊಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇದೀಗ ಈ ಪರಿಸ್ಥಿತಿ ಉಂಟಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
30% ತೆರಿಗೆ ವಿಧಿಸಿರುವುದರಿಂದ ಪೆಟ್ರೋಲ್ ಸಂಸ್ಥೆಗಳು ಕಂಪೆನಿಯನ್ನು ನಡೆಸದ ಸ್ಥಿತಿಯಲ್ಲಿದೆ. ಅಲ್ಲದೆ ಸರಕಾರ ಸಬ್ಸಿಡಿಯನ್ನೂ ನೀಡುತ್ತಿಲ್ಲ. ಹಿಂದೆ ಕ್ರೂಡ್ ಆಯಿಲ್ ಗೆ 30-40 ರೂ. ಇದ್ದರೆ, ಉಕ್ರೇನ್ ಗಲಭೆಯ ಬಳಿಕ 120 - 130 ರೂ. ಆಗಿದೆ. ಆದರೆ ಮನಮೋಹನ್ ಸಿಂಗ್ ಸರಕಾರ ಇರುವಾಗ ಜನರಿಗೆ ಹೊರೆಯಾಗಬಾರದೆಂದು ಸಬ್ಸಿಡಿ ನೀಡುತ್ತಿತ್ತು.
ಆದರೆ ಇದೀಗ ಕೇಂದ್ರ ಸರಕಾರ ಯಾವುದೇ ಸಬ್ಸಿಡಿಯನ್ನು ನೀಡುತ್ತಿಲ್ಲ. ಪರಿಣಾಮ ಎಲ್ಲಾ ಪೆಟ್ರೋಲಿಯಂ ಕಂಪೆನಿಗಳು ಮುಚ್ಚುವಂತಹ ಪರಿಸ್ಥಿತಿ ಉಂಟಾಗಿದೆ. ಅರೆ ಸರಕಾರಿ ವ್ಯವಸ್ಥೆಯ ಇಂಡಿಯನ್ ಆಯಿಲ್, ಎಚ್ ಪಿ, ಬಿಪಿಸಿಎಲ್ ಇಂತಹ ಸಂಸ್ಥೆಗಳು ಮಾತ್ರ ಕಾರ್ಯಾಚರಿಸುತ್ತಿದೆ. ಇದೀಗ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಪೆಟ್ರೋಲ್ ಬೆಲೆ ಕಡಿಮೆ ಮಾಡಿದ್ದು, ಚುನಾವಣೆ ಮುಗಿದ ತಕ್ಷಣ ಮತ್ತೆ ಬೆಲೆ ಏರಿಕೆಯಾಗಲಿದೆ ಎಂದು ಹೇಳಿದರು.
Kshetra Samachara
23/05/2022 07:22 pm