ಮೂಡುಬಿದಿರೆ: ರಾಜ್ಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ `ಮುಖ್ಯಮಂತ್ರಿ ಮಾರ್ಗದರ್ಶಿ' ಎಂಬ ಯೋಜನೆಯನ್ನು ಈಗಾಗಲೇ ರಚಿಸಲಾಗಿದ್ದು, ಬೈಜ್ಯೂಸ್ ಆಪ್ ಜೊತೆ ಪ್ರಥಮ ಹಂತದ ಮಾತುಕತೆಯನ್ನು ಕೂಡ ನಡೆಸಿದ್ದೇವೆ. ಈ ಯೋಜನೆಯಿಂದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, ಪರೀಕ್ಷೆ, ತಯಾರಿ ವಿಧಾನ ಸಹಿತ ವಿವಿಧ ಅಂಶಗಳನ್ನು ಕೂಡಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು.
ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ನಡೆದ `ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಸಂದರ್ಭ ಘೋಷಿಸಿದರು.
ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಭಾವನಾ. ಕೆ ಸಂವಾದದಲ್ಲಿ ಮಾತನಾಡಿ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುವ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸುವಂತೆ ಬೇಡಿಕೆಯಿಟ್ಟಾಗ ಸಿಎಂ, ಮುಖ್ಯಮಂತ್ರಿ ಮಾರ್ಗದರ್ಶಿ ಯೋಜನೆಯ ಬಗ್ಗೆ ತಿಳಿಸಿದರು.
ಅದೇ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಹಿತಶ್ರೀ ಬೇಡಿಕೆಗೆ ಉತ್ತರಿಸಿದ ಸಿಎಂ, ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸರ್ಕಾರದಿಂದ ನೆರವು ನೀಡುವ ಕುರಿತು ಕೂಡ ಚಿಂತನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್‌ನ ವಿದ್ಯಾರ್ಥಿನಿ ನಿಶ್ಮಿತಾ ಸಂವಾದದಲ್ಲಿ ಭಾಗವಹಿಸಿ, ರೈತರ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡುವಂತೆ ಬೇಡಿಕೆಯನ್ನು ಸಿಎಂ ಮುಂದಿಟ್ಟರು. ರೈತರ ಮಕ್ಕಳು ಮಾತ್ರವಲ್ಲ ವಿವಿಧ ವರ್ಗದ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ನೀಡುವಂತೆ ಬೇಡಿಕೆಯಿಟ್ಟಾಗ, ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.
PublicNext
01/06/2022 11:00 pm