ಮಂಗಳೂರು: ಹಿಜಾಬ್ ಸಂಬಂಧ ವಿವಾದದಲ್ಲಿರೋ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಘಟಕ ಕಾಲೇಜಿನ ತರಗತಿಯೊಂದರಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರೋ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಗಮನಕ್ಕೆ ತಂದಾಗ ಅದನ್ನು ತೆರವುಗೊಳಿಸಲಾಗಿದೆ. ತರಗತಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಹಿಜಾಬ್ ವಿವಾದ ಮಧ್ಯೆಯೇ ಇಬ್ಬರು ವಿದ್ಯಾರ್ಥಿಗಳು ತರಗತಿಯೊಳಗೆ ಸಾವರ್ಕರ್ ಫೋಟೊ ಅಳವಡಿಸಿದ್ದರು ಎನ್ನಲಾಗಿದೆ. ಮೊನ್ನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಪಂನ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ನಾಮಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿತ್ತು.
ಮಾಹಿತಿ ಪಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಗ್ರಾಪಂ ಮತ್ತು ಪೊಲೀಸರ ಸಹಕಾರದಿಂದ ಅದನ್ನು ತೆರವುಗೊಳಿಸಿದ್ದರು. ಇದೀಗ ಕಾಲೇಜು ತರಗತಿಯೊಳಗೆ ಸಾವರ್ಕರ್ ಫೋಟೊ ಅಳವಡಿಸಿ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
Kshetra Samachara
08/06/2022 07:12 pm