ಜಿಹಾದಿಗಳನ್ನು ಬಗ್ಗು ಬಡಿದೇ ಬಡಿಯುತ್ತೇವೆ. ನಾನು ನಿರಂತರ ಪೊಲೀಸ್ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಸಿಎಂಗೂ ನಿರಂತರ ಮಾಹಿತಿ ನೀಡುತ್ತಿದ್ದೇನೆ. ಮುಂದಿನ ಎರಡು ದಿನಗಳ ಕಾಲ ಮಂಗಳೂರಿನಲ್ಲೇ ಇದ್ದು ಪರಿಸ್ಥಿತಿ ಅವಲೋಕನ ಮಾಡುತ್ತೇನೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಬಿಜೆಪಿ ಯುವಮೋರ್ಚಾ ಮುಖಂಡನ ಹತ್ಯೆಯ ವಿಚಾರವಾಗಿ ಮಾತನಾಡಿದ ಅವರು, ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ನಡೆಯುತ್ತಿರುವ ಜಿಹಾದಿ ಮಾನಸಿಕತೆಯೇ ಪ್ರವೀಣ್ ಹತ್ಯೆಗೆ ಕಾರಣ. ಇಂತಹ ಜಿಹಾದಿ ಮಾನಸಿಕತೆಯೇ ಪಶ್ಚಿಮ ಬಂಗಾಳ, ಕೇರಳದಲ್ಲಿ ಕಾರ್ಯಕರ್ತರನ್ನು ಬಲಿ ಪಡೆಯುತ್ತಿದೆ. ಪ್ರವೀಣ್ ಹತ್ಯೆ ಚುನಾವಣೆ ವಿಚಾರವೇ ಅಲ್ಲ. ಚುನಾವಣೆಗೆ ಬೇಕಾದ ವಿಷಯಗಳೇ ಬೇರೆಯಿದೆ. ಪ್ರವೀಣ್ ಕೊಲೆಯನ್ನು ಚುನಾವಣಾ ವಿಷಯ ಮಾಡುವ ಇರಾದೆ ಬಿಜೆಪಿಗಿಲ್ಲ ಎಂದರು.
ನಾವು ಮನೆಯ ಮಗನನ್ನು ಕಳೆದುಕೊಂಡಿದ್ದೇವೆ. ಈಗಾಗಲೇ 9 ಮಂದಿಯನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಆರೋಪಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ನೀಡುತ್ತೇವೆ. ಜಿಹಾದಿ ಮಾನಸಿಕತೆಯನ್ನು ಮಟ್ಟ ಹಾಕುವ ಕೆಲಸವನ್ನು ಎರಡೂ ಸರ್ಕಾರಗಳು ಮಾಡುತ್ತದೆ. ನಾನೂ ಹಿಂದೂ ಸಂಘಟನೆಯಲ್ಲೇ ಬೆಳೆದು ಸಾರ್ವಜನಿಕ ಜೀವನಕ್ಕೆ ಬಂದವನು. ಕಾರ್ಯಕರ್ತನನ್ನು ಕಳೆದು ಕೊಂಡಾಗ ಮತ್ತೊಬ್ಬ ಕಾರ್ಯಕರ್ತನಿಗೆ ಆಗುವ ಆಕ್ರೋಶ ನನಗೆ ಅರಿವಿದೆ. ಈ ಆಕ್ರೋಶವನ್ನು ನಾನೂ ಅನುಭವಿಸಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
PublicNext
27/07/2022 08:23 pm