ಕಾಪು: ನೂತನ ಕಾಪು ತಾಪಂ ಪ್ರಥಮ ಅಧ್ಯಕ್ಷರಾಗಿ ಬಿಜೆಪಿಯ ಶಶಿಪ್ರಭಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಯು.ಸಿ ಶೇಖಬ್ಬ ಉಚ್ಚಿಲ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
ಆಗಸ್ಟ್ 10 ರಂದು ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಿಸದಂತೆ ತಡೆಹಿಡಿಯಲಾಗಿತ್ತು. ಅಕ್ಟೋಬರ್ 20ರಂದು ಹೈಕೋರ್ಟ್ ಅದೇಶದಂತೆ ಕುಂದಾಪುರ ಚುನಾವಣಾ ಉಪ ವಿಭಾಗ ಅಧಿಕಾರಿ ರಾಜು ಕೆ. ಮಂಗಳವಾರ ಫಲಿತಾಂಶ ಘೋಷಣೆ ಮಾಡಿದರು.
ತಾಪಂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಶಿಪ್ರಭಾ ಶೆಟ್ಟಿ ಮತ್ತು ಕಾಂಗ್ರೆಸ್ ನಿಂದ ರೇಣುಕಾ ಪುತ್ರನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೇಶವ ಮೊಯ್ಲಿ, ಕಾಂಗ್ರೆಸ್ ನಿಂದ ಯು. ಸಿ. ಶೇಖಬ್ಬ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ರೇಣುಕಾ ಪುತ್ರನ್ ಅವರ ನಾಮಪತ್ರ ತಿರಸ್ಕೃತವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಶಿಪ್ರಭಾ ಏಕಮಾತ್ರ ಅಭ್ಯರ್ಥಿಯಾಗಿ ಉಳಿದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಯು.ಸಿ ಶೇಖಬ್ಬ ಹಾಗು ಕೇಶವ ಮೊಯ್ಲಿ ಕಣದಲ್ಲಿದ್ದರು.
ಯು.ಸಿ ಶೇಖಬ್ಬ 7 ಮತಗಳನ್ನು ಪಡೆದರೆ ಕೇಶವ ಮೊಯ್ಲಿ 5 ಮತಗಳನ್ನು ಪಡೆದಿದ್ದಾರೆ.ಶಾಸಕ ಲಾಲಾಜಿ ಆರ್. ಮೆಂಡನ್, ತಹಸೀಲ್ದಾರ್ ಮುಹಮ್ಮದ್ ಇಸಾಖ್,ಮುಖ್ಯಾಧಿಕಾರಿ ವೆಂಕಟೇಶ ನಾವಡ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ತಾ.ಪಂ. ಕಾರ್ಯ ನಿರ್ವಹಣೆ ಅಧಿಕಾರಿ ವಿವೇಕಾನಂದ ಗಾವ್ಕರ್,ಜಿ.ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಿಲ್ಪಾ ಸುವರ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
03/11/2020 12:14 pm