ಕುಂದಾಪುರ: ಬುಧವಾರ ಬೆಳಿಗ್ಗೆ ತ್ರಾಸಿ ಕಡಲ ತೀರದಲ್ಲಿ ಪತ್ತೆಯಾದ ಬೃಹತ್ ಮೀನಿನ ಕಳೇಬರವನ್ನು ಅರಣ್ಯಾಧಿಕಾರಿಗಳು ಮತ್ತು ಮಂಗಳೂರಿನ ರೀಫ್ವಾಚ್ ಮೆರೈನ್ ಕನ್ಸರ್ವೇಶನ್ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸತ್ತಿರುವ ಮೀನು ಪೈಲೆಟ್ ವೇಲ್ ಎನ್ನುವ ಅಪರೂಪದ ತಿಮಿಂಗಲದ ಪ್ರಭೇದ ಎಂದು ತಿಳಿಸಿದ್ದಾರೆ.
ತ್ರಾಸಿ ಕಡಲ ತೀರದಲ್ಲಿ ಬೃಹತ್ ಮೀನು ಬಿದ್ದು ಕೊಳೆತ ಸ್ಥಿತಿಯಲ್ಲಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಸ್ಥಳೀಯ "ಬಚ್ಚಾ ಬಾಯ್ಸ್' ತಂಡ ಮೀನನ್ನು ಅಲ್ಲಿಯೇ ಮರಳಿನಲ್ಲಿ ದಫನ ಮಾಡಿದ್ದರು.
ಇದಾದ ಬಳಿಕ ಅರಣ್ಯ ಇಲಾಖೆ ಹಾಗೂ ಮಂಗಳೂರಿನ ರೀಪ್ವಾಚ್ ಮರೈನ್ ಕನ್ಸರ್ವೇಶನ್ ಸಂಸ್ಥೆಯ ಸಿಬ್ಬಂದಿ ತ್ರಾಸಿ ಕಡಲ ತೀರಕ್ಕೆ ಆಗಮಿಸಿ ದಫನ ಮಾಡಿರುವ ಮೀನಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಮೀನಿನ ಶ್ವಾಸಕೋಶದಲ್ಲಿ ಗಾಳಿ ಇರಲಿಲ್ಲದ ಕಾರಣ ಶುಷ್ಕ ವಾತಾವರಣದ ಒತ್ತಡದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಆರ್.ಎಂ.ಸಿಯ ತೇಜಸ್ವಿನಿ, ಯಾವುದೇ ರೀತಿಯ ಪ್ರಾಣಿಗಳು, ಮೀನುಗಳು ತೊಂದರೆಯಲ್ಲಿದ್ದಲ್ಲಿ ಅಥವಾ ಸಾವನ್ನಪ್ಪಿದಲ್ಲಿ ತಿಳಿಸುವಂತೆ ಸೂಚಿಸಿದರು. ಜೊತೆಗೆ ಇನ್ನೊಬ್ಬ ಅಧಿಕಾರಿ ವಿರಿಲ್ ಸ್ಟೀಫನ್ ಮಾತನಾಡಿ, ಸಾಧ್ಯವಾದಷ್ಟು ತ್ಯಾಜ್ಯಗಳನ್ನು ಸಮುದ್ರ ಪಾಲಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಅರಣ್ಯಾಧಿಕಾರಿ ದಿಲೀಪ್ ಕುಮಾರ್ ಅವರು, ಅಪರೂಪದ ಸಂತತಿಗಳನ್ನು ಸಂರಕ್ಷಿಸಿಬೇಕಾಗಿರುವುದು ನಮ್ಮ ಕರ್ತವ್ಯ ಎಂದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಯುವಕರು ಸಹಕರಿಸಿದರು.
Kshetra Samachara
21/09/2022 10:05 pm