ಉಡುಪಿ: ಒಂದೆರೆಡು ವರ್ಷಗಳಿಂದ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇದರಲ್ಲಿ ನಿವೃತ್ತ ಅಧಿಕಾರಿಗಳು, ಉಪನ್ಯಾಸಕರು ಸೇರಿದಂತೆ ಸುಶಿಕ್ಷಿತರು ಕೂಡ ಸೇರಿದ್ದಾರೆ. ಬಹುತೇಕ ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಈ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ.
ಈ ರೀತಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದು ಇಂದಿನ ಅಗತ್ಯವಾಗಿದೆ. ಇದರಲ್ಲಿ ಮಾಧ್ಯಮದವರ ಪಾತ್ರ ಕೂಡ ಮುಖ್ಯವಾಗಿದೆ. ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು, ಪ್ರೆಸ್ ಕೌನ್ಸಿಲ್ ನಿಯಮಗಳನ್ನು ಪಾಲಿಸುವುದು ಕೂಡ ಅಗತ್ಯ.
ಆದುದರಿಂದ ಈ ಬಗ್ಗೆ ಮಾಧ್ಯಮದವರಿಗಾಗಿ ಉಡುಪಿಯ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಮಣಿಪಾಲ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಡಿವಿಜಿ ಪುಣ್ಯ ಸ್ಮರಣೆ ಪ್ರಯುಕ್ತ ಇವತ್ತು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ‘ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿಯವರು ಆತ್ಮಹತ್ಯೆ ಕುರಿತು ಒಂದು ಗಂಟೆಗಳ ಕಾಲ ಉಪನ್ಯಾಸ ನೀಡಿದರು.ಮುಖ್ಯವಾಗಿ ಆತ್ಮಹತ್ಯೆ ತಡೆಯುವಲ್ಲಿ ವೈದ್ಯರು ,ಪೋಷಕರು ,ಶಿಕ್ಷಕರು ಮತ್ತು ಒಟ್ಟು ಸಮಾಜದ ಜೊತೆಗೆ ಮಾಧ್ಯಮದವರ ಪಾತ್ರವೂ ಬಹಳ ಮುಖ್ಯವಾದದ್ದು.ಆತ್ಮಹತ್ಯೆ ಕುರಿತ ವರದಿ ಮಾಡುವಾಗ ವರದಿಗಾರರು ಸಾಕಷ್ಟು ಸೂಕ್ಷ್ಮ ವಾಗಿರಬೇಕು.ಆತ್ಮಹತ್ಯೆ ವರದಿಗಳು ಮತ್ತೊಂದು ಜೀವ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂತಿರಬಾರದು.ವರದಿಗಳ ಕೊನೆಯಲ್ಲಿ ಇದಕ್ಕೆ ಪರಿಹಾರ ಮತ್ತು ಸಹಾಯವಾಣಿಯ ನಂಬರ್ ಮತ್ತಿತರ ವಿವರಗಳಿದ್ದರೆ ಓದುಗರಿಗೆ ಅದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.
ಬಳಿಕ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಇದರ ಮಾಧ್ಯಮ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಮತ್ತು ಸಹ ಪ್ರಾಧ್ಯಾಪಕಿ ಡಾ.ಶುಭ ಎಚ್.ಎಸ್. ಉಪನ್ಯಾಸ ನೀಡಿದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು.ಮನೋವೈದ್ಯ ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕ ಮಾತನಾಡಿದರು.ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ನಾಗರಾಜ್,ರೋಟರಿ ಮಣಿಪಾಲದ ಸದಸ್ಯರು,
ಮತ್ತು ಪತ್ರಕರ್ತ ಸಂಘದ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.
Kshetra Samachara
07/10/2021 03:49 pm