ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಪಟ್ಟೆಕ್ರಾಸ್ ಪೆರ್ಗುಂಡಿ ಹಾಗೂ ಉಳೆಪಾಡಿ ಶಾಂಭವಿ ನದಿಯಲ್ಲಿ ಕಳೆದ ಕೆಲವು ದಿನಗಳಿಂದ ಎಗ್ಗಿಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, ನಿಲ್ಲಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಮರಳುಗಾರಿಕೆಗೆ ಸರಕಾರದಿಂದ ಇನ್ನಷ್ಟೇ ಪರವಾನಿಗೆ ನೀಡಬೇಕಾಗಿದ್ದು, ಇದರ ನಡುವೆ ಕೆಲ ಮರಳು ಮಾಫಿಯಾ ಕುಳಗಳು ಸ್ಥಳೀಯ ರಾಜಕೀಯ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಸಂಪರ್ಕದ ಪ್ರಧಾನ ಏಳಿಂಜೆ ಸೇತುವೆಗೆ ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಏಳಿಂಜೆ ಪಟ್ಟೆ ಕ್ರಾಸ್, ಪೆರ್ಗುಂಡಿ ಶಾಂಭವಿ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆಯಿಂದ ಟಿಪ್ಪರ್‌ಗಳ ಓಡಾಟ ವಿಪರೀತವಾಗಿದ್ದು ಸ್ಥಳೀಯ ನಾಗರಿಕರು ಭಯಭೀತರಾಗಿದ್ದಾರೆ. ಈ ನಡುವೆ ಮಹಿಳೆಯೊಬ್ಬರು ಮರಳುಗಾರಿಕೆ ನಡೆಯುತ್ತಿರುವ ಪ್ರದೇಶದಿಂದ ಎರಡು ಬುಟ್ಟಿ ಮರಳನ್ನು ಕೊಂಡು ಹೋಗಲು ಮುಂದಾದಾಗ ಮರಳು ಮಾಫಿಯಾದವರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಕೂಡಲೇ ಮುಲ್ಕಿ ತಹಶೀಲ್ದಾರ್, ಗಣಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
25/09/2021 06:52 pm