ಮೂಡುಬಿದಿರೆ: ಹೆಣ್ಣು ಮಕ್ಕಳು ತಮಗೆ ಎಲ್ಲಾದರೂ ತೊಂದರೆ ಉಂಟಾದರೆ ಧ್ವನಿ ಎತ್ತಿ ಮಾತನಾಡುವ ಧೈರ‍್ಯವನ್ನು ಹೊಂದಿರಬೇಕು ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಮೂಕಾಂಬಿಕಾ ಜಿ. ಎಸ್ ಹೇಳಿದರು.
ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜು ಆಂತರಿಕ ನಿರ್ವಹಣಾ ಸಮಿತಿ ವತಿಯಿಂದ ನಡೆದ ‘ಪೋಶ್’ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನಮ್ಮಲ್ಲಿ ಹಲವಾರು ರೀತಿಯ ಕಾನೂನು ಕ್ರಮಗಳಿದ್ದರೂ ಲೈಂಗಿಕ ಕಿರುಕುಳ ಮಹಿಳೆಯರ ಮೇಲೆ ನಡೆಯುತ್ತಲೆ ಇದೆ. ಮಹಿಳೆಯರ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಹಲವು ಇದ್ದರೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಡಿಮೆಯಾಗಲಿಲ್ಲ. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರುವುದರ ಜೊತೆಗೆ ತಮ್ಮಲ್ಲಿನ ಕೀಳರಿಮೆ ತ್ಯಜಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯ ಮೇಲಿನ ಕಿರುಕುಳ (ತಡೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, ೨೦೧೩ ಅಥವಾ ಪೋಶ್ ಕಾಯ್ದೆಯನ್ನು ಅಂಗೀಕರಿಸಿ, ಆ ಮೂಲಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಯಿತು. ದೈಹಿಕ ಸ್ಪರ್ಶ ಮತ್ತು ಅದರ ಮುಂದುವರಿಕೆ, ಲೈಂಗಿಕ ಸಹಕಾರಗಳಿಗೆ ಬೇಡಿಕೆ ಅಥವಾ ಮನವಿ, ಲೈಂಗಿಕತೆಗೆ ಸಂಬಂಧಿಸಿದ ಹೇಳಿಕೆಗಳು, ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಯಾವುದೇ ರೀತಿಯ ಲೈಂಗಿಕ, ಅನುಚಿತ ದೈಹಿಕ, ವಾಕ್ ಅಥವಾ ಇತರೆ ರೀತಿಯ ನಡವಳಿಕೆಗಳು ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಸದಾಕತ್ ಮಾತನಾಡಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಹ ಶಕ್ತಿ ಪ್ರತಿಯೊಬ್ಬ ಮಹಿಳೆಯರಲ್ಲಿ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಏನ್, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ವೇತಾ ಆರ್, ಹಿಂದಿ ವಿಭಾಗದ ಉಪನ್ಯಾಸಕಿ ಸಹನಾ ಉಪಸ್ಥಿತರಿದ್ದರು.
Kshetra Samachara
13/09/2022 08:10 pm