ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಬಂಟ್ವಾಳ ಲೋಕಕಲ್ಯಾಣಾರ್ಥವಾಗಿ ವಿಶ್ವಕರ್ಮ ಯಜ್ಞ ಮತ್ತು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜಕಲ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಶ್ವಕರ್ಮ ಸಭಾಭವನ ಉದ್ಘಾಟನಾ ಕಾರ್ಯಕ್ರಮಗಳು ಮೇ.20ರಿಂದ ಆರಂಭಗೊಂಡು ಮೇ 22ರವರೆಗೆ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಲಯನ್ ಸುಧಾಕರ ಆಚಾರ್ಯ ಮಾಹಿತಿ ನೀಡಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕುಲಗುರುದ್ವಯರಾದ ಅನಂತಶ್ರೀವಿಭೂಷಿತ ಪರಮಪೂಜ್ಯ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಅರೆಮಾದನಹಳ್ಳಿಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ ಭವನ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ 20ರಂದು ಶುಕ್ರವಾರ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, 21ರಂದು ಶನಿವಾರ ಪ್ರಾತಃಕಾಲ ಬ್ರಾಹ್ಮೀಮುಹೂರ್ತದಲ್ಲಿ ಶ್ರೀ ರಮೇಶ ಪುರೋಹಿತ ಮತ್ತು ವೈದಿಕ ವೃಂದದ ಪೌರೋಹಿತ್ಯದಲ್ಲಿ ವಿಶ್ವಕರ್ಮ ಯಜ್ಞ ಪ್ರಾರಂಭ, ಬೆಳಗ್ಗೆ 8ಕ್ಕೆ ಬಿ.ಸಿ.ರೋಡ್ ಸರ್ಕಲ್ ನಿಂದ ವಿಶ್ವಕರ್ಮ ಸಭಾಭವನದವರೆಗೆ ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಮತ್ತು ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಹಾಸನದ ಪರಮಪೂಜ್ಯ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9ಕ್ಕೆ ಯಜ್ಞದ ಪೂರ್ಣಾಹುತಿ ಬಳಿಕ 9.35ಕ್ಕೆ ಶ್ರೀ ಗುರುವರ್ಯರ ದಿವ್ಯಹಸ್ತದಿಂದ ವಿಶ್ವಕರ್ಮ ಸಭಾಭವನ ಲೋಕಾರ್ಪಣೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಸ್ವಾಮೀಜಿದ್ವಯದ ಆಶೀರ್ವಚನ ಗಣ್ಯರ ಸಮ್ಮುಖ ನಡೆಯಲಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ವಿ.ಸುನಿಲ್ ಕುಮಾರ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಆನೆಗುಂದಿ ಪೀಠ ಪ್ರತಿಷ್ಠಾನ ಹುಬ್ಬಳ್ಳಿಯ ವೇ.ಬ್ರ.ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಸಹಿತ ಗಣ್ಯರು ಭಾಗವಹಿಸುವರು ಎಂದರು. ಮಹಾಅನ್ನಸಂತರ್ಪಣೆ, ದಾನಿಗಳಿಗೆ ಗೌರವಾರ್ಪಣೆ, ವಿಶೇಷ ನೃತ್ಯ ಕಾರ್ಯಕ್ರಮ, ಯಕ್ಷಗಾನವೈಭವ, ಕೊಳಲು, ಸ್ಯಾಕ್ಸೋಫೋನ್ ವಾದನ, ರಸಮಂಜರಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಭಾ ಭವನ ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ ಆಚಾರ್ಯ ಪುಂಜಾಲಕಟ್ಟೆ, ವಿಶ್ವಕರ್ಮ ಸಮಾಜ ಸೇವಾ ಸಂಘ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ, ಕೋಶಾಧಿಕಾರಿ ಜಯಚಂದ್ರ ಆಚಾರ್ಯ ಸರಪಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಸುನೀಲ್ ಬಿ.ಆಚಾರ್ಯ ಭಂಡಾರಿಬೆಟ್ಟು, ಪ್ರಮುಖರಾದ ಶಶಿಧರ ಆಚಾರ್ಯ ಉಪಸ್ಥಿತರಿದ್ದರು.
Kshetra Samachara
17/05/2022 07:19 pm