ಮಂಗಳೂರು: ಅಲ್ಪಸಂಖ್ಯಾತರಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗಲು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 5 ಲಕ್ಷ ರೂ. ಸಾಲ ನೀಡುವ ನೂತನ ಯೋಜನೆಯ ಅನುಮೋದನೆಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಠಾಣ್ ತಿಳಿಸಿದರು.
ನಗರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಮಾತನಾಡಿದ ಅವರು, ಆಯವ್ಯಯದಲ್ಲಿ ಈ ನೂತನ ಯೋಜನೆಗೆ ಅನುಮೋದನೆ ದೊರೆಯಲಿದೆ. ಬಿಪಿಎಲ್ ಕುಟುಂಬದ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ನೀಡಲು ಉದ್ದೇಶಿಸಿರುವ 5 ಲಕ್ಷ ರೂ.ಗಳ ಸಾಲ ಯೋಜನೆಯಲ್ಲಿ 1.50 ಲಕ್ಷ ರೂ. ಸಬ್ಸಿಡಿ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಅರಿವು ಶೈಕ್ಷಣಿಕ ಸಾಲ ಸೌಲಭ್ಯ ಯೋಜನೆಯಡಿ ಕಳೆದ ವರ್ಷ 77 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 57 ಕೋಟಿ ರೂ. ನೀಡಲಾಗಿದೆ. ಮುಂದಿನ ವರ್ಷ 200 ಕೋಟಿ ರೂ. ಸಾಲ ಸೌಲಭ್ಯ ನೀಡುವ ಕುರಿತು ಚಿಂತಿಸಲಾಗಿದ್ದು, ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅರಿವು ಸಾಲಕ್ಕಾಗಿ ಡಿ.15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೊರೊನಾ ಕಾಲದಲ್ಲಿ 24 ಸಾವಿರ ಜನರಿಗೆ ತಲಾ 10 ಸಾವಿರ ರೂ. ನಂತೆ ಸಾಲ ನೀಡಲಾಗಿದೆ. ಈ ಬಾರಿಯೂ ಸುಮಾರು 12 ಸಾವಿರ ಜನರಿಗೆ ಕೋವಿಡ್ ಹಿನ್ನೆಲೆಯಲ್ಲಿ ಸಾಲ ನೀಡುವ ಗುರಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಸಾವಿರ ಜನರಿಗೆ ಸಾಲ ಸೌಲಭ್ಯ ನೀಡಲು ಗುರಿ ನೀಡಲಾಗಿದೆ, ಆಟೋ ರಿಕ್ಷಾ ಖರೀದಿಗೆ 75 ಸಾವಿರ ರೂ. ಸಬ್ಸಿಡಿಯೊಂದಿಗೆ 2.5 ಲಕ್ಷ ರೂ. ಸಾಲ ನೀಡಲಾಗಿದೆ ಎಂದು ಮುಕ್ತಾರ್ ಹುಸೇನ್ ಪಠಾಣ್ ತಿಳಿಸಿದರು.
Kshetra Samachara
13/12/2021 08:42 pm