ಬಂಟ್ವಾಳ: ನಂಜನಗೂಡಿನಲ್ಲಿ ದೇವಸ್ಥಾನವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ಬಿಜೆಪಿಯ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ದೋಷಾರೋಪಣೆ ಮಾಡುತ್ತಿದ್ದು, ವಾಸ್ತವವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ನೇರ ಹೊಣೆಗಾರ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ದೇವಸ್ಥಾನ, ದೈವಸ್ಥಾನ ಮತ್ತು ಪ್ರಾರ್ಥನಾ ಮಂದಿರ ತೆರವುಗೊಳಿಸುವುದರ ವಿರುದ್ಧ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಂದಲೇ ಹಿಂದುಗಳಿಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮದವರನ್ನೂ ಸಮಾನವಾಗಿ ನೋಡುವ ಪಕ್ಷವಾಗಿದ್ದು, ಹಿಂದುಗಳಿಗೆ ಅನ್ಯಾಯವಾದಾಗ ಪ್ರತಿಭಟನೆ ನಡೆಸುತ್ತಿದ್ದೇವೆ. ಬಿಜೆಪಿಯ ಸಂಸದರು, ಮಂತ್ರಿಗಳು, ನಾಯಕರು ಇಂದು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುತ್ತಿದ್ದಾರೆ. ಆದರೆ ಅವರೇ ಇದರ ಜವಾಬ್ದಾರರು ಎಂದರು.
ಅಪಪ್ರಚಾರಗಳ ಮೂಲಕ ಕಾಂಗ್ರೆಸ್ ಅನ್ನು ದೂಷಿಸಲಾಗುತ್ತಿದೆ. ಆದರೆ ಧರ್ಮದ ಹೆಸರಿನಲ್ಲಿ ಹತ್ಯೆಗಳನ್ನು ಮಾಡಿದವರು ಕಾಂಗ್ರೆಸ್ ನವರಲ್ಲ, ಹಿಂದುಗಳಾದ ವಿನಾಯಕ ಬಾಳಿಗಾ, ಹರೀಶ್ ಹತ್ಯೆ ಪ್ರಕರಣಗಳ ಹಿಂದೆ ಯಾರಿದ್ದರು ಎಂದು ಪ್ರಶ್ನಿಸಿದರು. ಹತ್ಯೆಗಳಾದಾಗ ನಮ್ಮ ಮೇಲೆ ಅಪಪ್ರಚಾರ ಮಾಡುತ್ತಾರೆ, ಅಮಾಯಕರ ಹೆಸರು ಹೇಳಿ ಲಾಭ ಪಡೆದು, ಪ್ರಚೋದನಕಾರಿಯಾಗಿ ಭಾಷಣ ಮಾಡಲಾಗುತ್ತದೆ ಎಂದು ರೈ ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋಹನ ಗೌಡ ಕಲ್ಮಂಜ, ಜಿಪಂ ಮಾಜಿ ಸದಸ್ಯರಾದ ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪ್ರಮುಖರಾದ ಅಬ್ಬಾಸ್ ಆಲಿ, ಪದ್ಮನಾಭ ರೈ, ಮಲ್ಲಿಕಾ ಶೆಟ್ಟಿ, ಜೇಸಿಂತ ಡಿ'ಸೋಜ, ಜಯಂತಿ ವಿ ಪೂಜಾರಿ ಲವೀನಾ ವಿಲ್ಮಾ ಸಹಿತ ಪುರಸಭಾ ಸದಸ್ಯರು, ಪಕ್ಷದ ವಿವಿಧ ನಾಯಕರು ಉಪಸ್ಥಿತರಿದ್ದರು.
Kshetra Samachara
18/09/2021 04:25 pm