ತುಳುನಾಡು ಶ್ರೀಮಂತ ಸಂಸ್ಕೃತಿ, ಸಂಪ್ರದಾಯಗಳ ತವರು. ಆರಾಧನೆ, ಮನರಂಜನೆಯ ಜೊತೆಗೆ ಸಾವಿರಾರು ಸಂಪ್ರದಾಯಗಳು ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಇವತ್ತು ತುಳುವರಿಗೆ "ಆಟಿ" ಅಮವಾಸ್ಯೆ. ಈ ದಿವಸ ಮುಂಜಾನೆ ಹೊತ್ತಿಗೇ ತುಳುನಾಡ ಹಿರಿಯರು, ಯುವಕರು ಹಾಲೆ ಮರದತ್ತ ಹೋಗಿ, ಅದರ ತೊಗಟೆ ಸೀಳಿ, ಅದರಿಂದ ಕಷಾಯ, ಗಂಜಿ ಮತ್ತಿತರ ಪದಾರ್ಥಗಳನ್ನು ಸಿದ್ಧಪಡಿಸಿ ಮನೆಮಂದಿಯೆಲ್ಲ ಕುಡಿದು, ನೆರೆಮನೆಯವರಿಗೂ ಹಂಚುವ ಸಂಪ್ರದಾಯ ಇದೆ. ಇವತ್ತು ಜಿಲ್ಲೆಯ ಹಲವೆಡೆ ಈ ದೃಶ್ಯ ಕಂಡುಬಂತು.
ಏನಿದರ ಹಿನ್ನೆಲೆ?
ಆಟಿ ತಿಂಗಳು ಋತು ಸಂಧಿಕಾಲದಲ್ಲಿ ಬರುವ ಸಮಯ. ಕೃಷಿಕುಟುಂಬಗಳು ಒಂದು ಹಂತದ ಬೇಸಾಯ ಕಾರ್ಯಗಳನ್ನೆಲ್ಲ ಮುಗಿಸುವ ಸಮಯ. ಈ ಬಾರಿ ಮಳೆ ಕಡಿಮೆಯಿದ್ದರೂ, ಹಿಂದೆಲ್ಲ ಆಷಾಢ ಮಾಸದಲ್ಲಿ ಮುಂಗಾರು ಅಬ್ಬರಿಸುವ ಸಮಯ. ಮಳೆಯ ತೀವ್ರತೆ ಈ ತಿಂಗಳಲ್ಲಿ ಹೆಚ್ಚಾಗಿರುವುದರಿಂದ ಮರ ಗಿಡ ಗಂಟಿಗಳೆಲ್ಲ ಚಿಗುರಿ ಹಸಿರು ಹೊದ್ದು ಮಲಗಿರುತ್ತವೆ. ಕ್ರಿಮಿಕೀಟಗಳೂ ಈ ಸಮಯದಲ್ಲೇ ಅತಿಯಾಗಿ ಸಂಚರಿಸುತ್ತಿರುತ್ತವೆ. ಕೃಷಿಕರು ಈ ಹೊತ್ತು ಬಾಧಿಸುವ ರೋಗಗಳಿಂದ ತನ್ನನ್ನೂ ತನ್ನವರನ್ನೂ ರಕ್ಷಿಸಬೇಕಾದ ಜವಾಬ್ದಾರಿ ಹೊಂದಿರುತ್ತಾರೆ.
ಗಿಡಮರಗಳು ನಳನಳಿಸುವ ಸಮಯ
ಇದೇ ವೇಳೆ ಗಿಡಮೂಲಿಕೆಗಳೂ ಈ ಸಮಯದಲ್ಲಿ ಸಮೃದ್ಧವಾಗಿರುತ್ತದೆ. ಗಿಡ ಮರಗಳಲ್ಲಿ ಔಷಧೀಯ ಗುಣ ಹೇರಳವಾಗಿರುತ್ತವೆ ಎಂಬ ನಂಬಿಕೆ. ಮರದ ತೊಗಟೆಯಲ್ಲಿ ಆಟಿ ತಿಂಗಳಲ್ಲಿ ಔಷಧೀಯ ಗುಣಗಳು ಸಂಗ್ರಹವಾಗುತ್ತವೆ ಎಂದು ತುಳುವರು ನಂಬುತ್ತಾರೆ. ಮಾತ್ರವಲ್ಲ ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ.
ಈ ದಿವಸ ಅಂದರೆ, ಆಟಿ ಅಮವಾಸ್ಯೆಯಂದು ಹಾಲೆ ಮರದ ತೊಗಟೆಯಲ್ಲಿ ಸಂಗ್ರಹವಾಗಿರುವ ರಸವನ್ನು ಮುಂಜಾನೆ ಕಲ್ಲಿನಿಂದ ಜಜ್ಜಿ ತೆಗೆದು ಸೇವಿಸುವುದರಿಂದ ಶರೀರದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ರೋಗಗಳಿಂದ ರಕ್ಷಣೆ ಒದಗಿಸಬಹುದು. ಈ ಕಾರಣಕ್ಕಾಗಿ ಇವತ್ತು ತುಳುನಾಡ ಪ್ರತಿ ಮನೆಯವರೂ ಹಾಲೆ ಮರದ ತೊಗಟೆಯ ಕಷಾಯ ಕುಡಿಯುತ್ತಾರೆ. ಇದರಿಂದ ಗಂಜಿ ಮಾಡುತ್ತಾರೆ. ಇನ್ನಿತರ ಆಹಾರ ವಸ್ತುಗಳಿಗೂ ಹಾಲೆ ಮರದ ರಸ ಹಾಕುವ ಸಂಪ್ರದಾಯ ತುಳುನಾಡಿನಲ್ಲಿದೆ.
ವರದಿ: ರಹೀಂ ಉಜಿರೆ
PublicNext
28/07/2022 03:48 pm