ಹಿರಿಯಡ್ಕ: ಉಡುಪಿ ಸಮೀಪದ ಹಿರಿಯಡ್ಕದ ಪಾಳು ಬಿದ್ದ ಮನೆಯೊಂದರಲ್ಲಿ ಅವಿತಿದ್ದ ಚಿರತೆಯನ್ನು ದಿನವಿಡೀ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಸೆರೆಹಿಡಿಯಲಾಗಿದೆ. ಕಳೆದ ಆರು ದಿನಗಳಿಂದ ಈ ಚಿರತೆ ಮನೆಯೊಳಗೆ ಸೇರಿಕೊಂಡಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆತಂಕದಲ್ಲೇ ದಿನ ದೂಡುತ್ತಿದ್ದರು. ನಿನ್ನೆ ಆಪರೇಷನ್ ಚಿರತೆಗೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು.
ಬೆಳಿಗ್ಗೆಯಿಂದ ಸ್ಥಳದಲ್ಲಿ ಜಮಾಯಿಸಿದ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಈ ಕಾರ್ಯಾಚರಣೆಗೆ ಸಾಕ್ಷಿಯಾದರು. ಆದರೆ ಪಾಳು ಮನೆಯ ಒಳಗೆ ಹೋಗುವಂತೆಯೂ ಇಲ್ಲ. ಚಿರತೆ ಹಿಡಿಯಲು ಅರಿವಳಿಕೆ ಮದ್ದು ಮತ್ತು ಮದ್ದು ಶೂಟ್ ಮಾಡಲು ಗನ್ ವ್ಯವಸ್ಥೆ ಇರಲಿಲ್ಲ. ಅದನ್ನು ಕಾರ್ಕಳ ಮತ್ತು ಮಂಗಳೂರಿನಿಂದ ತರಿಸಿ ಕಾರ್ಯಾಚರಣೆಗಿಳಿಯಲಾಯಿತು.
ಅರವಳಿಕೆ ತಜ್ಞರು ಸ್ಥಳಕ್ಕೆ ಬಂದು ಚಿರತೆಗೆ ಚುಚ್ಚುಮದ್ದು ಹಾಕಲು ನಡೆಸಿದ ಒಂದೆರಡು ಪ್ರಯತ್ನಗಳು ವಿಫಲವಾದವು. ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಯಿತು.
ಬೋನಿನೊಳಗೆ ಚಿರತೆಯನ್ನು ಹಾಕಿ ಕೊಂಡೊಯ್ಯಲಾಗಿದೆ. ಸುಮಾರು ಮೂರು ವರ್ಷ ಪ್ರಾಯದ ಈ ಗಂಡು ಚಿರತೆಗೆ ಮೈತುಂಬಾ ಗಾಯಗಳಾಗಿವೆ. ಐದಾರು ದಿನಗಳ ಮುಂಚೆ ಈ ಮನೆಯೊಳಗೆ ಚಿರತೆ ನುಗ್ಗಿರುವ ಸಾಧ್ಯತೆ ಇದ್ದು, ಸರಿಯಾದ ಆಹಾರ ಸಿಗದೇ ಕಂಗಾಲಾಗಿತ್ತು. ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
Kshetra Samachara
08/09/2022 08:13 am